ಹೃದಯವನ್ನು ಒಡೆದ ಮೇಲೆ
ದೇಹವನ್ನು ಮಣ್ಣು ಮಾಡಿ ಬಿಡು
ಶವಕ್ಕೆ ಸುತ್ತಲು ಯಾವ ಬಟ್ಟೆ ಸಿಕ್ಕದಿದ್ದರೂ
ನಿನ್ನ ಧುಪಟ್ಟ ಹೊದಿಸಿಬಿಡು
ಯಾರಾದರು ಯಾವ ರೋಗವಿತ್ತೆಂದು
ಕೇಳಿದರೆ
ನನ್ನನ್ನು
ಪ್ರೀತಿಸುತ್ತಿದ್ದ ಎಂದು ಹೇಳಿಬಿಡು???!!!!!

ನಿಮ್ಮ ಟಿಪ್ಪಣಿ ಬರೆಯಿರಿ

Filed under ಕವನಗಳು


ದಂಡಯಾತ್ರೆ…

(೧೯೯೨ ರಲ್ಲಿ ಬರೆದ ಒಂದು ಹಳೇ ಕವನ)

ನನ್ನ ಹುಡುಗಿಯರೆಲ್ಲ
ನನ್ನ ನೀರಲ್ಲೇ ಈಜಿ
ದಡ ಸೇರಿಕೊಂಡು,
ಸೇಫ್ ಆಗಿ ಮದುವೆ ಮಾಡಿಕೊಂಡು
ಎಸ್ಕೇಪ್ ಆಗಿ ಹೋದರು

ಆದರೆ, ಈಗಲೂ
ನಾನು ಅದೇ ಪಾಪದ
ಬ್ರಹ್ಮಚಾರಿ…

ಸೈಕಲ್ ಪೋರಿ ಸುಬ್ಬುಲೂ
ಬಸ್ಟಾಪ್ ಗೆಳತಿ ಕಮಲೂ
ಚಡ್ಡೀ ದೋಸ್ತ್ ಮೀನಾಕ್ಷಿ
ಸದಾ ಬಾಲ್ಕಾನಿ ರೂಪಾವತಿ
ಹೈಹೀಲ್ಡ್ ಕುಳ್ಳಿ ವಿಜೀ ಲಕ್ಷೀ
ಗಬ್ಬು ನಾತದ ಪರಿಮಳ
ಹೀಗೆ, ಅದು
ಪರಷ್ಕರಣೆ ಆಗುತ್ತಲೇ ಇದ್ದ
ಮತದಾರರ ಪಟ್ಟಿ!

ಎಲ್ಲರಿಗೂ ಮದುವೆಯಾದಾಗ
ಥೇಟ್! ಪರನಾರಿ ಸೋದರನಂತೆ
ಹರಸಿ ಒಬ್ಬಟ್ಟು ತಿಂದು ಬಂದೆ…

ಸದ್ಯಕ್ಕೆ…
ಹೋಟೆಲ್ ಮೇ ಖಾನಾ
ಆಯಿಲ್ ಮಿಲ್ ಮೇ ಸೋನಾ
ವರ್ತನೆಯಾಗಿ ಹೋಗಿದೆ

ಹುಡುಕಾಟ ಚಾಲ್ತಿಯಲ್ಲಿದೆ
ಹೊಸ ಗರ್ಲ್ ಫ್ರೆಂಡ್ಸಿಗೆ
ಅವರಿಗೂ,
ಮದುವೆ ಫಿಕ್ಸ್ ಆಗೋವರಗೆ!

ನಿಮ್ಮ ಟಿಪ್ಪಣಿ ಬರೆಯಿರಿ

Filed under ಕಥೆಗಳು


ಶೌಖತ್ ಅಲಿಯ

ದುಖಾನಿನಲಿ ,

ಕೊಕ್ಕೆಯಲಿ ಸಿಕ್ಕು

ಬಿಕ್ಕುವಂತಿದೆ…

ನಮ್ಮ ಸಾಕು ಪ್ರಾಣಿಯ

ಮೂಕ ಶೋಕ-ವೆEದನೆ,

ಅವರದೋ ಹೊಟ್ಟೆಪಾಡಿನ

ವ್ಯಾಪಾರ !!

ನಮ್ಮದು ?!

ಇದೇನಾ.. ? ರಿI

ಸಂಸ್ಕಾರ ???

ನಿಮ್ಮ ಟಿಪ್ಪಣಿ ಬರೆಯಿರಿ

Filed under ಕಥೆಗಳು


ಇವತ್ತು ನಮ್ಮ ಸಾಲೆ ವತಿಯಿಂದ ಕನ್ನಡ ರಾಜೋಸ್ತವ ಮಡಿಗಿದೀವಿ.
ಆಗಾಗಿ ಬಂದಂತಹ ಹತಿಥಿ ಮಹೋದಯರು, ತಮ್ಮ ಹಾಸನವನ್ನು ಹಲಂಕರಿಸಬೇಕು.
ಬಂದಂತಹ ಎಲ್ಲರಿಗೂ ಹಾದರದ ಸುಸ್ವಾಗತ.


ಸರ್ ಈ ಕನ್ನಡ ರಾಜೋಸ್ತವ ಯಾಕೆ ಮಾಡಬೇಕು?


ನಮ್ಮ ಭಾಸೆ ಸುದ್ದವಾಗಿರಬೇಕು. ಹಾಗೇ ಕನ್ನಡ ಅನ್ನೋ ಭಾಸೆಐತೆ ಅಂತಾ ನಾವು ಮರಿಬಾರದು ಅಂತಾ ಹಿವತ್ತು ಹಿದನ್ನು ಮಾಡಿದೇವೆ. ಹೀಗ ತಾವು ಸ್ವಲ್ಪ….. ಸಿಹಿ ತಗೊಂಡು ಓಗಬೇಕಾಗಿ ಇನಂತ.
ಇದು ನಮ್ಮ ಸಾನೇ ಮೇಟರು.

ನಿಮ್ಮ ಟಿಪ್ಪಣಿ ಬರೆಯಿರಿ

Filed under ಕಥೆಗಳು


ಅಲೆದದ್ದು ಸಾಕು
ಬಿಕನಾಸಿಯಂತೆ
ಪಕ್ಕಕ್ಕೆ ಒಬ್ಬಳು ಬರಲಿ
ಎಂದರು ಮನೆಯವರು
ದಿಕ್ಕಿಲ್ಲದ ಮನೆ ಹುಡುಗಿ
ಸುರ ಸುಂದರಿ
ಹುಡುಗ ಹೇಗೆ ?
ಕೇಳಲಿಲ್ಲ ಅವರು
ಇವರು ಹೇಳಲಿಲ್ಲ
ಕೆಲಸ
ಜಾಸ್ತಿ ಅವನಿಗೆ
ಬಾರು ,ಪಬ್ಬು ,ಸಿಗರೇಟು
ಇಸ್ಪೀಟು ಅಡ್ದೆಯಲಿ
ಥೇಟ್ ಧರ್ಮರಾಯ
ಅದರೂ ನಮ್ಮ ಹುಡುಗ
ಪುಟಕ್ಕಿಟ್ಟ ಚಿನ್ನ
(ಸ್ವಗತ) ಒತ್ತೆಯಿಟ್ಟ ಚಿನ್ನ
ಇನ್ನು ಬಿಡಿಸಿಕೊಂಡಿಲ್ಲ
ಒಳಮನೆಯಲ್ಲಿ
ಹುಡುಗಿ
ಕಣ್ಣೀರಿಡುತ್ತಿದೆ
ಪಡಸಾಲೆಯ ಮಂದಿಗೆ
ಮುಖವಿಲ್ಲ
ಸುಮ್ಮನೆ ಬಿಂಕದ ಮಾತು
ಇಲ್ಲೇನು ಕಡಿಮೆ ನಿನಗೆ
ಎಲ್ಲವು ಇದೆ
ಬೇಕಾದ್ದು ಬಿಟ್ಟು
ತುಟಿಗೆ ಬಂದ ಮಾತು
ಗಂಟಲಲ್ಲೇ ಉಳಿಯುತ್ತದೆ
ಈಗೀಗ
ಹುಡುಗಿ ನಗುವುದನ್ನು
ರೂಡಿ ಮಾಡಿಕೊಂಡಿದೆ
ಲೋಕದ ಕಣ್ಣಿಗೆ ಮಾತ್ರ
ದೊಡ್ಡವರ ಮನೆ ಜನ
ಅವಳ ಕಣ್ಣೀರನ್ನು
ಪ್ರತಿಷ್ಠೆಯ ಮುಖವಾಡ
ಹಿಂದೆ ಬಚ್ಚಿಡಲಾಗಿದೆ
ಅವಳ
ಪ್ರಶ್ನೆಗಳಿಗೆ
ಅವನಲ್ಲಿ ಉತ್ತರವಿಲ್ಲ
ಅವಳ
ಮೌನ ಮತ್ತು ನಗುವನ್ನು
ಎದುರಿಸಲು ದೈರ್ಯವು ಇಲ್ಲ
.
(ಇದು ಕವನ ಅಂತ ಬರೆದದ್ದು ಅಲ್ಲ, ಹೀಗೆ ಸುಮ್ಮನೆ ಹೊಳೆಯಿತು ಅಷ್ಟೇ …)

ನಿಮ್ಮ ಟಿಪ್ಪಣಿ ಬರೆಯಿರಿ

Filed under ಕಥೆಗಳು

ಶುಭೋದಯ


ನಾನೆಂಬುದು ನಾನಲ್ಲ,
ನೀನೆಂಬುದು ತರವಲ್ಲ.
ಇಲ್ಲಿ ನಾವೆಂಬುದೇ ಅರಿಯಿರೆಲ್ಲಾ.
ಜಗವೊಂದೇ, ನಾವೊಂದೇ ತಿಳಿಯಿರೆಲ್ಲಾ…

ಶುಭೋದಯ ಗೆಳೆಯರೇ…

ನಿಮ್ಮ ಟಿಪ್ಪಣಿ ಬರೆಯಿರಿ

Filed under .ಶುಭೋದಯ

ಮೆಟ್ರೋ ರೈಲು ನೆನಪ ಹಳಿ ಪರಿಮಳ


ಉಗಿಬಂಡಿ ರೈಲನ್ನು ಮೊದಲ ಸಲ ನೋಡಿದ್ದು ಬಣ್ಣದ ಅಂಕಲಿಪಿ ಪುಸ್ತಕದ ಮೂರನೇ ಪುಟದಲ್ಲಿ. ಮಲೆನಾಡಿನ ಕಾಡಿನ ಮಡಿಲಲ್ಲಿ ಇರುವ ನಮ್ಮೂರು ಗುಂಡ್ಕಲ್ಲಿಗೆ ರೈಲು ಬರುವುದಿಲ್ಲ. ಹತ್ತಿರದಲ್ಲೇ ಇರುವ ಪುಟ್ಟ ಪಟ್ಟಣ ಯಲ್ಲಾಪುರಕ್ಕೂ ರೈಲು ಬರುವುದಿಲ್ಲ. ರೈಲಿನ ಸದ್ದು, ಹಳಿ, ವಾಸನೆ, ಗೇಟು, ಗೇಟಿನ ಪಕ್ಕದ ಕೆಂಪು ದೀಪ ಎಲ್ಲವೂ ನಮಗೆ ಅಪರಿಚಿತ. ಯಲ್ಲಾಪುರ ದಾಟಿ, ಶಿರಸಿ ಹಾದು, ಸಿದ್ಧಾಪುರ ದಾಟಿದರೆ ಸಿಗುವ ತಾಳಗುಪ್ಪಾ ಎಂಬ ಊರಿಗೆ ರೈಲು ಬರುತ್ತದೆ ಎಂಬ ವಿಷಯವೇ ನಮಗೆ ರೋಮಾಂಚನ ಉಂಟುಮಾಡುತ್ತಿತ್ತು.
ಬೆಳಗಿಂದ ರಾತ್ರಿ ತನಕ ರೇಡಿಯೋ ಕೇಳುತ್ತಾ ಬೆಳೆದ ನಮಗೆ ರೈಲಿನ ಸುದ್ದಿ ಕೊಡುತ್ತಿದ್ದುದು ಆಕಾಶವಾಣಿ- ಧಾರವಾಡ ಕೇಂದ್ರ. ಕುರ್ಲಾ ಎಂಬ ಹೆಸರನ್ನು ಮೊದಲ ಸಲ ಕೇಳಿದ್ದು ರೇಡಿಯೋದಲ್ಲಿ ಬರುತ್ತಿದ್ದ ರೈಲ್ವೆ ಮಾಹಿತಿಯಲ್ಲಿ. ಮೀರಜ್, ಗುಂತಕಲ್ ಎಂಬ ಊರುಗಳಿಗೆ ಮೊದಲ ಸಲ ಕರೆದುಕೊಂಡು ಹೋಗಿದ್ದು ರೈಲ್ವೇ ಮಾಹಿತಿ. ಈ ಮಾಹಿತಿ ಕೊಡುವ ಆಕಾಶವಾಣಿ ಕೇಂದ್ರವನ್ನು ಮೊದಲ ಸಲ ನೋಡಿದ ಕೆಲವೇ ನಿಮಿಷಗಳ ನಂತರ ನಾವು ಧಾರವಾಡ ರೈಲು ನಿಲ್ದಾಣವನ್ನೂ ನೋಡಿದ್ದೆವು. ಆರನೇ ಕ್ಲಾಸಿನಲ್ಲಿ ಶಾಲಾ ಪ್ರವಾಸಕ್ಕೆ ಹೋಗಿದ್ದ ನಮ್ಮಲ್ಲಿ ಹೆಚ್ಚಿನವರಿಗೆ ಮೊದಲ ಸಲ ರೈಲನ್ನು ತೋರಿಸಿದ್ದು ಧಾರವಾಡ.

ಧಾರವಾಡದಲ್ಲಿ ಮೊದಲ ಸಲ ನೋಡಿದ ರೈಲನ್ನು ಹತ್ತಿ ನೋಡುವುದಕ್ಕೆ ಐದು ವರ್ಷ ಕಾಯಬೇಕಾಯಿತು ಮತ್ತು ಮಂಗಳೂರಿನಷ್ಟು ದೂರ ಹೋಗಬೇಕಾಯಿತು. ನಾನು ಮೊದಲ ಸಲ ರೈಲು ಹತ್ತಿದ ಸ್ಟೇಷನ್ ಮಂಗಳೂರು. ಮೊದಲ ಸಲ ಇಳಿದ ಸ್ಟೇಷನ್ ಕಣ್ಣಾನೂರು. ಮೊದಲ ಸಲ ರೈಲು ಹತ್ತುವಾಗ ಆದ ಗೊಂದಲ ಮತ್ತು ಇಳಿದಾಗ ಆದ ಸಂಭ್ರಮ ಎರಡೂ ನನಗೆ ಈಗಲೂ ಸ್ಪಷ್ಟವಾಗಿ ನೆನಪಿದೆ. ಇಲ್ಲಿಂದ ಶುರುವಾಯಿತು ರೈಲಿನ ಪ್ರೀತಿ. ಬೆಂಗಳೂರಿಗೆ ಮೊದಲ ಸಲ ಬಂದಾಗ ರೈಲು ಹತ್ತಿ ಹುಬ್ಬಳ್ಳಿಗೆ ಹೋಗಲು ಧೈರ್ಯ ಆಗಿರಲಿಲ್ಲ. ಬರೀ ಬಸ್ ಟಿಕೆಟ್ ತೆಗೆದುಕೊಂಡು ಹತ್ತಿ ಕುಳಿತು ಅಭ್ಯಾಸ ಇದ್ದ ನನ್ನಂಥವರು ರೈಲು ನಿಲ್ದಾಣದಲ್ಲಿ ಗೊಂದಲಗೊಳ್ಳುತ್ತೇವೆ. ಸಂತೆಯಲ್ಲಿ ಅಮ್ಮನಿಂದ ತಪ್ಪಿಸಿಕೊಂಡ ಮಕ್ಕಳಂತಾಗಿರುತ್ತೇವೆ. ಇಷ್ಟೆಲ್ಲಾ ದಿನಗಳು ಆದ ಮೇಲೂ, ಬೇರೆ ಬೇರೆ ಸ್ಟೇಷನ್ನುಗಳಲ್ಲಿ ರೈಲು ಹತ್ತಿ ಬೇರೆ ಬೇರೆ ಸ್ಟೇಷನ್ನುಗಳಲ್ಲಿ ಇಳಿದ ಮೇಲೂ ನನಗೆ ರೈಲು ನಿಲ್ದಾಣಕ್ಕೆ ಹೋದಾಗ ಅದೇ ಭಯ ಸಣ್ಣದಾಗಿ ಕಾಡುತ್ತದೆ ಎಂದರೆ ನೀವು ನಂಬಬೇಕು.
ರೈಲಿನ ಮೇಲೆ ಇಷ್ಟೆಲ್ಲಾ ಪ್ರೀತಿ ಇದ್ದುದರಿಂದಲೋ ಏನೋ ಮದುವೆಯಾಗಿ ಬೆಂಗಳೂರಿನಲ್ಲಿ ಮೊದಲು ಸಂಸಾರ ಮಾಡಿದ ಮನೆ, ರೈಲು ಹಳಿಯ ಪಕ್ಕದಲ್ಲೇ ಇತ್ತು. ಮೈಸೂರಿನಿಂದ ಬೆಂಗಳೂರಿಗೆ ಬರುವ ಮತ್ತು ಹೋಗುವ ರೈಲುಗಳೆಲ್ಲಾ ನಮ್ಮ ಶಾಮಣ್ಣ ಗಾರ್ಡನ್ ಮನೆಯ ಪಕ್ಕದಿಂದಲೇ ಹಾದು ಹೋಗುತ್ತಿದ್ದವು. ರೈಲು ಹೋಗುತ್ತಿದ್ದರೆ ಆಡುತ್ತಿದ್ದ ಮಾತುಗಳನ್ನು ನಾವು ನಿಲ್ಲಿಸಬೇಕಾಗುತ್ತಿತ್ತು. ರಾತ್ರಿ ಹೋಗುವ ರೈಲುಗಳು ಎದೆಯ ಮೇಲೆ ಹಾದು ಹೋದ ಹಾಗೆ ಆಗಿ ಎಚ್ಚರವಾಗಿಬಿಡುತ್ತಿತ್ತು. ಗಡಿಬಿಡಿಯಲ್ಲಿರುವಾಗಲೇ ರೈಲು ಗೇಟಿನಲ್ಲಿ ಸಿಕ್ಕಿಹಾಕಿಕೊಂಡು ಫಜೀತಿಯಾಗುತ್ತಿತ್ತು.

ಹೀಗೆಲ್ಲಾ ಇದ್ದರೂ ರೈಲು ಬರುವಾಗ ಮಾಡುವ ಸದ್ದು ನನಗೆ ಇಷ್ಟ. ರೈಲು ಓಡುತ್ತಿರುವಾಗ ಅದರಲ್ಲಿರುವ ಮುಖಗಳನ್ನು ನೋಡುತ್ತಾ ನಿಂತುಬಿಡುವುದು ಇಷ್ಟ. ರೈಲಿನ ಬೋಗಿಗಳು, ಅಲ್ಲಿ ಟೀ ಮಾರುವ ಹುಡುಗರು, ನಿಲ್ದಾಣದಲ್ಲಿ ಕೇಳುವ ಪ್ರಕಟಣೆಗಳು, ನಿಲ್ಲುವ ಊರುಗಳಲ್ಲಿ ಕಾಣಿಸುವ ಮುಖಗಳು, ಹಳದಿ ಹಿನ್ನೆಲೆಯಲ್ಲಿ ಕಪ್ಪು ಅಕ್ಷರದಲ್ಲಿ ಕಾಣಿಸುವ ಬೋರ್ಡುಗಳು, ಪುಸ್ತಕದಂಗಡಿಗಳು, ನಂದಿನಿ ಮಿಲ್ಕ್ ಕೇಂದ್ರಗಳು ಎಲ್ಲವೂ ಇಷ್ಟವೋ ಇಷ್ಟ. ರೈಲು ಗೇಟಿನಲ್ಲಿ ನಡು ರಾತ್ರಿ ಬಸ್ಸು ನಿಂತಾಗಲೂ ಕೆಳಗಿಳಿದು ನಿಂತು ಉದ್ದಕ್ಕೆ ಓಡುವ ರೈಲನ್ನು ನೋಡಿ ಸಂಭ್ರಮಿಸಿದ್ದೇನೆ. ಹೋದ ಊರುಗಳಲ್ಲೆಲ್ಲಾ ರೈಲು ಹುಡುಕಿದ್ದೇನೆ. ರೈಲಿನಲ್ಲಿ ಪ್ರಯಾಣ ಮಾಡಲು ಸಾಧ್ಯವಿದ್ದಾಗಲೆಲ್ಲಾ ಬಸ್ಸು ತಪ್ಪಿಸಿಕೊಂಡಿದ್ದೇನೆ.

***

ಹೀಗಿದ್ದರೂ ಲೋಕಲ್ ಟ್ರೇನುಗಳ ಕಲ್ಪನೆ ಪುನಃ ನನಗೆ ಹೊಸದು. ಮುಂಬೈ ಲೋಕಲ್ ರೈಲುಗಳಲ್ಲಿ ಪ್ರಯಾಣ ಮಾಡಲು ಮೊದಲ ಸಲ ಟಿಕೆಟ್ ಕೊಡಿಸಿದ್ದು ಜಯಂತ್ ಕಾಯ್ಕಿಣಿ. ಅವರ ಕತೆಗಳನ್ನು ಓದುತ್ತಾ, ಮುಂಬೈಯನ್ನು ಮನಸ್ಸಿನಲ್ಲಿ ಸೃಷ್ಟಿಮಾಡಿಕೊಳ್ಳುತ್ತಾ, ಲೋಕಲ್ ರೈಲಿನ ಮಜವನ್ನು ಅನುಭವಿಸುತ್ತಾ, ಮುಂಬೈ ಹೇಗೆ ರೈಲು ಇಲ್ಲದೇ ಚಲಿಸುವುದೇ ಇಲ್ಲ ಎಂದು ತಿಳಿದುಕೊಂಡಿದ್ದ ನನಗೆ ಲೋಕಲ್ ಟ್ರೇನು ಹತ್ತುವುದಕ್ಕೆ ತುಂಬಾ ವರ್ಷ ಕಾಯಬೇಕಾಯಿತು. ಸರತಿಯಲ್ಲಿ ನಿಂತು, ನೂಕುನುಗ್ಗಲಿನಲ್ಲಿ ಮುಂಬೈ ಲೋಕಲ್ ಮೊದಲ ಸಲ ಹತ್ತಿದ್ದು ದಾದರ್‌ನಲ್ಲಿ.
ಯಾವುದೇ ನಗರವನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಲ್ಲಿನ ಸಾಮಾನ್ಯ ಜನ ಪ್ರಯಾಣ ಮಾಡುವ ಬಸ್ಸಿನಲ್ಲೋ, ರೈಲಿನಲ್ಲೋ ಪ್ರಯಾಣ ಮಾಡಬೇಕು ಎಂದು ನಂಬಿದವನು ನಾನು. ಮುಂಬೈಗೆ ಎಷ್ಟೊಂದು ಸಲ ಹೋದರೂ ಲೋಕಲ್ ಟ್ರೇನುಗಳಲ್ಲಿ ಸುತ್ತಾಡಲು ಆಗಿರಲಿಲ್ಲ. ಒಂದಿಡೀ ದಿನ ಲೋಕಲ್ ಟ್ರೇನಿನಲ್ಲಿ ಸುತ್ತಾಡಿದ ದಿನದ ತನಕ ಮುಂಬೈ ಪರಿಚಯವಾಗಿರಲೇ ಇಲ್ಲ ಎಂದು ನನಗೆ ಈಗಲೂ ಅನಿಸುತ್ತದೆ. ಟ್ರೇನುಗಳನ್ನು ಪ್ರೀತಿಸುವ ನಾನು ಒಂದಿಡೀ ದಿನ ಬೇರೆ ಏನೂ ಕೆಲಸ ಮಾಡದೇ ಕುರ್ಲಾದಿಂದ ವಿಕ್ಟೋರಿಯಾ ಟರ್ಮಿನಸ್‌ಗೆ ಅಲ್ಲಿಂದ ವಾಪಸ್ ಕುರ್ಲಾಕ್ಕೆ, ದಾದರ್‌ಗೆ ಬಾಂದ್ರಾಕ್ಕೆ, ಅಂಧೇರಿಗೆ ಹೀಗೆ ಗೊತ್ತು ಗುರಿ ಇಲ್ಲದೇ ಸುತ್ತಿದ್ದೆ. ಟಿಕೆಟ್ ತೆಗೆದುಕೊಳ್ಳಲು ಸರತಿಯಲ್ಲಿ ನಿಂತಿದ್ದೆ. ಹಾರ್ಬರ್, ಸೆಂಟ್ರಲ್ ಮತ್ತು ವೆಸ್ಟ್ ಲೈನ್‌ಗಳನ್ನು ಅರ್ಥ ಮಾಡಿಕೊಳ್ಳುತ್ತಾ ಮುಂಬೈ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ. ಸ್ಟೇಷನ್ ಮತ್ತು ಟ್ರಾಕ್ ಪಕ್ಕದ ಮನೆಗಳನ್ನು ನೋಡಿ ಗೊಂದಲಗೊಂಡಿದ್ದೆ. ಕೋಲ್ಕತ್ತಾದಲ್ಲಿ ಕ್ಯಾನಿಂಗ್‌ನಿಂದ ಬಾಲಿಗಂಜ್ ತನಕ ರೈಲಿನಲ್ಲಿ ಹೋದಾಗಲೂ ನನಗೆ ಹೀಗೇ ಗೊಂದಲವಾಗಿತ್ತು. ರೈಲು ಸ್ಟೇಷನ್ ಪಕ್ಕದಲ್ಲಿ ಅಷ್ಟು ಪುಟ್ಟ ಮನೆಗಳಲ್ಲಿ ಇರುವವರು ದಿನಾ ರೈಲು ನೋಡುತ್ತಾ ಇದ್ದುಬಿಡಬಹುದಲ್ಲಾ ಎಂದು ಹೊಟ್ಟೆಕಿಚ್ಚಾಗಿತ್ತು!

ಕಣ್ಣಾನೂರಿನ ಸ್ಟೇಷನ್ನು, ಮುಂಬೈಯ ಲೋಕಲ್ಲು, ಶಾಮಣ್ಣಾ ಗಾರ್ಡನ್ ಮನೆಯ ಪಕ್ಕದ ರೈಲು ಹಳಿಗಳನ್ನು ನೋಡಿ ಸಂಭ್ರಮಿಸಿದ್ದ ನನಗೆ ಲಂಡನ್ ನಗರದ ಆಕ್ಸ್‌ಫರ್ಡ್ ಸ್ಟ್ರೀಟಿನ ಕೆಳಗಡೆ ಇಳಿದು ರೈಲು ಹತ್ತಿದಾಗ ಪುನಃ ಅಷ್ಟೇ ಸಂಭ್ರಮವಾಗಿತ್ತು. ಅಲ್ಲಿನ ವಿಕ್ಟೋರಿಯಾ ಟರ್ಮಿನಸ್‌ಗೆ ಹೋದಾಗ ಮುಂಬೈ ವಿಟಿ ನೆನಪಾಯಿತು. ಅದೇ ನೀಲಿ ಮತ್ತು ಕೆಂಪು ಅಕ್ಷರಗಳಲ್ಲಿ ಬರೆದಿರುವ ಬೋರ್ಡು ನೋಡಿದಾಗ ಯಾಕೆ ಸಂತೋಷವಾಗಬೇಕು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ವಿಕ್ಟೋರಿಯಾ ಟರ್ಮಿನಸ್‌ನಿಂದ ಒಂದು ಬೇಸಿಗೆಯ ಇಳಿಸಂಜೆ ಲಂಡನ್ ನಗರದ ಹೊರವಲಯದಲ್ಲಿರುವ ಊರು ಕ್ರಾಯ್ಡಾನ್‌ಗೆ ಮಾಡಿದ ಪ್ರಯಾಣದ ನೆನಪು ಸೆಂಟ್ರಲ್ ಲೈಬ್ರರಿಯಲ್ಲಿ ಸಿಕ್ಕಿದ ಹುಡುಗಿಯಷ್ಟೇ ಹಸಿರಾಗಿದೆ.

ಅಲ್ಲಿಂದ ಮುಂದೆ ಸುತ್ತಾಡಿದ ಯುರೋಪಿನ ಪ್ರತಿ ಊರುಗಳಲ್ಲೂ ನಾನು ಕಾರಣವಿಲ್ಲದೇ ರೈಲು ಹತ್ತಿದ್ದೇನೆ. ನನ್ನನ್ನು ಇಡೀ ಪ್ಯಾರಿಸ್ ಸುತ್ತಾಡಿಸಿದ್ದು ಅಲ್ಲಿನ ಲೋಕಲ್ ರೈಲು. ಅಲ್ಲಿನ ಶಟಲೆಟ್ ನಿಲ್ದಾಣದಿಂದ ಲಾ ಬ್ಲಾಂಕಾ ಮೆನ್ಸಿಲ್‌ಗೆ (ಫ್ರೆಂಚ್‌ನಲ್ಲಿ ಇದನ್ನು ಸರಿಯಾಗಿ ಹೇಳಲು ಕೊನೆಗೂ ನನಗೆ ಸಾಧ್ಯವಾಗಲಿಲ್ಲ) ಹೋಗುವಾಗ ಸಿಕ್ಕಿದ ಸುಂದರಿ ಹುಡುಗಿಯಷ್ಟೇ ರೈಲಿನ ಮೇಲೂ ನನಗೆ ಪ್ರೀತಿಯಾಗಿದೆ. ಹಾಗೆ ಮಾಡಿದ ಪ್ರಯಾಣದ ಟಿಕೆಟನ್ನು ಒಂದು ಪ್ರಶಸ್ತಿಯೇನೋ ಎನ್ನುವಂತೆ ಯಾವುದೋ ಕತೆ ಪುಸ್ತಕದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ. ಸ್ವಿಟ್ಜರ್ಲೆಂಡಿನ ಪುಟ್ಟ ಪಟ್ಟಣ ಲುಸಾರ್ನೆಯಿಂದ ಒಂದು ಗಂಟೆ ದೂರದಲ್ಲಿರುವ ಪುಟ್ಟ ಹಳ್ಳಿ ಎಂಗೆಲ್‌ಬರ್ಗ್ ತನಕ ಒಂದು ಇಳಿ ಸಂಜೆ ಮಾಡಿದ ಪ್ರಯಾಣ ನಾನು ಮಾಡಿದ ಅತ್ಯುತ್ತಮ ರೈಲು ಪ್ರಯಾಣಗಳಲ್ಲಿ ಒಂದು. ರೋಮ್ ವಿಮಾನ ನಿಲ್ದಾಣದಲ್ಲಿ ಒಂದು ಟರ್ಮಿನಲ್‌ನಿಂದ ಇನ್ನೊಂದಕ್ಕೆ ಹೋಗಲು ಹತ್ತಿದ ರೈಲು ಉಂಟು ಮಾಡಿದ ವಿಸ್ಮಯ ಕಲೋಸಿಯಮ್ ನೋಡಿದಾಗ ಕೂಡ ಆಗಿರಲಿಲ್ಲ. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಹತ್ತಿದ ಟ್ರಾಮ್ ರೈಲು ಕಾರಣವಿಲ್ಲದೇ ಶಿರಸಿಯ ಲೋಕಲ್ ಬಸ್ಸು ನೆನಪಿಸಿದ್ದಕ್ಕೆ ಕಾರಣ ಇರಲಿಕ್ಕಿಲ್ಲ.

***
ರೈಲನ್ನು ಹೀಗೆ ಕಾರಣವಿಲ್ಲದೇ ಪ್ರೀತಿ ಮಾಡಿರುವ ನನಗೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಮೆಟ್ರೊ ರೈಲು ಚಲಿಸುವುದನ್ನು ನೋಡಿದಾಗ ಮೊದಲ ಸಲ ರೈಲನ್ನು ನೋಡಿದಾಗ ಆದಷ್ಟೇ ಸಂಭ್ರಮವಾಗಿತ್ತು. ನಾನು ಕೆಲಸ ಮಾಡುವ ಝೀ ಕನ್ನಡ ಕಚೇರಿಯ ಮೀಟಿಂಗ್ ರೂಮ್‌ಗಳಿಂದ, ಟೇರೇಸಿನಲ್ಲಿರುವ ಕೆಫೆಟೇರಿಯಾದಿಂದ ಮೆಟ್ರೋ ರೈಲು ಓಡುವುದನ್ನು ಕಳೆದ ಎರಡು ತಿಂಗಳಿಂದಲೂ ತುಂಬಾ ಪ್ರೀತಿಯಿಂದ ನೋಡುತ್ತಾ ಬಂದವನು ನಾನು. ನಿನ್ನೆ ಅದು ಸಾರ್ವಜನಿಕರ ಓಡಾಟಕ್ಕೆ ತೆರೆದುಕೊಂಡಾಗ ಪುನೀತ್ ಸಿನಿಮಾಕ್ಕೆ ಆಗುವ ನೂಕುನುಗ್ಗಲು ಕಾಣಿಸಿತ್ತು. ಆದರೆ ಇಂದು ಮಧ್ಯಾಹ್ನ ಮೆಟ್ರೋ ಖಾಲಿಯಿದ್ದಂತೆ ಕಾಣಿಸಿತು. ತಕ್ಷಣ ಕಚೇರಿಯಲ್ಲಿದ್ದ ಕೆಲಸವನ್ನೆಲ್ಲಾ ಮರೆತು ಗಡಿಬಿಡಿಯಿಂದ ಎಂಜಿ ರಸ್ತೆಯ ಸ್ಟೇಷನ್ ತಲುಪಿದೆ. ಮಂಗಳೂರಿನಿಂದ ಕಣ್ಣಾನೂರಿಗೆ ಟಿಕೆಟ್ ತೆಗೆದುಕೊಂಡಷ್ಟೇ ಸಂಭ್ರಮದಿಂದ ಟಿಕೆಟ್ ತೆಗೆದುಕೊಂಡೆ. ಮೆಟ್ರೋ ರೈಲು ಬಂದು ನಿಂತಾಗ ನೂಕುನುಗ್ಗಲಿನಲ್ಲಿ ಪ್ರಯತ್ನಪಟ್ಟು ಹೋಗಿ ಸೀಟು ಹಿಡಿದು ಕುಳಿತುಕೊಂಡೆ. ಬೆಂಗಳೂರನ್ನು ಎತ್ತರದಿಂದ ನೋಡಿ ಸಂಭ್ರಮಪಟ್ಟೆ. ಅಲಸೂರು ಮನೆಯ ತಾರಸಿಗಳಲ್ಲಿ ಕಾಣಿಸಿದ ಒಣಗಿದ ಎಲೆಗಳು, ಒಣಗಿಸಲು ಇಟ್ಟಿರುವ ಮೆಣಸಿನ ಕಾಯಿ, ದಾರಕ್ಕೆ ನೇತಾಡುತ್ತಿರುವ ಬಟ್ಟೆಗಳು, ನೀರಿನ ಟ್ಯಾಂಕು, ಟೀವಿ ಡಿಶ್‌ಗಳನ್ನು ನೋಡುತ್ತಾ ಬೈಯಪ್ಪನಹಳ್ಳಿಯತನಕ ಹೋಗಿ ಇಳಿದೆ. ಅಲ್ಲಿಂದ ವಾಪಸ್ ದುಡ್ಡು ಕೊಡದೇ ರೈಲು ಹತ್ತಿ ಅದೇ ಮನೆಯ ತಾರಸಿಯನ್ನು, ಒಣಗಲು ಹಾಕಿದ ಬಟ್ಟೆಗಳನ್ನು ನೋಡುತ್ತಾ ಎಂಜಿ ರಸ್ತೆಯ ಸ್ಟೇಷನ್ನಿಗೆ ಬಂದಿಳಿದೆ. ಹೊರಗೆ ಬಂದು ನೋಡಿದರೆ ಪುನಃ ಉದ್ದಕ್ಕೆ ಕ್ಯೂ ಕಾಣಿಸಿತು.

ರೈಲಿನಲ್ಲಿ ಬಳಸಿದ ಕನ್ನಡ ಇನ್ನಷ್ಟು ಸರಿಯಾಗಬೇಕು ಅನಿಸಿತು. ಆಯ್ಕೆ ಮಾಡಿಕೊಂಡ ಕನ್ನಡದ ಫಾಂಟ್‌ಗಳು ಇನ್ನಷ್ಟು ಚೆಂದವಿರಬಹುದಿತ್ತು ಅನಿಸಿತು. ರೈಲು ಮತ್ತು ಫ್ಲಾಟ್‌ಫಾರ್ಮಿನ ನಡುವೆ ಇರುವ ಜಾಗದಲ್ಲಿ ಮಕ್ಕಳ ಕಾಲು ಸಿಕ್ಕಿ ಹಾಕಿಕೊಂಡರೆ ಏನು ಗತಿ ಎಂದೆಲ್ಲಾ ಅನಿಸಿತಾದರೂ ನಮ್ಮ ಮೆಟ್ರೋ ಜಗತ್ತಿನ ಯಾವುದೇ ರೈಲಿಗೆ ಕಡಿಮೆ ಇಲ್ಲ ಅಂತ ಖುಷಿಯಾಗಿದ್ದಂತೂ ಹೌದು.
ನಾನು ಪ್ರಯಾಣ ಮಾಡಿದಾಗ ಮೆಟ್ರೋ ರೈಲು ಆರಂಭವಾಗಿ ೨೪ ಗಂಟೆ ಕೂಡ ಆಗಿರಲಿಲ್ಲ. ಹೊಸದಾಗಿ ಬಿಡುಗಡೆಯಾದ ಸಿನಿಮಾ ನೋಡುವವರಂತೆ ಜನ ಮೆಟ್ರೋ ನೋಡಲು ಬಂದಿದ್ದರು. ಪ್ರಯಾಣಕ್ಕೆ ಹತ್ತಿದವರಿಗಿಂತ ಕುತೂಹಲಕ್ಕೆ ರೈಲು ಹತ್ತಿದವರೇ ಹೆಚ್ಚು. ಹುಡುಗಿಯರೆಲ್ಲಾ ನಾಚಿಕೊಳ್ಳುತ್ತಾ ರೈಲಿನೊಳಗೆ ಬರುತ್ತಿದ್ದರೆ ಹುಡುಗರೆಲ್ಲಾ ಮೊಬೈಲಿನಲ್ಲಿ ಫೋಟೋ ತೆಗೆಯುವುದರಲ್ಲಿ ಕಳೆದು ಹೋಗಿದ್ದರು. ಹೀಗಾಗಿ ನಾನು ಬೇರೆ ಬೇರೆ ಊರುಗಳಲ್ಲಿ ನೋಡಿದ ರೈಲಿನ ಜಗತ್ತು, ಜೀವಂತಿಕೆ ಇನ್ನೂ ಅಲ್ಲಿರಲಿಲ್ಲ. ಮೆಟ್ರೋ ರೈಲು ಬೇರೆ ಬೇರೆ ಕಡೆ ಓಡಾಡತೊಡಗಿದ ಮೇಲೆ ಬೆಂಗಳೂರಿನಲ್ಲೂ ಅಂಥದ್ದೊಂದು ರೈಲು ಜಗತ್ತು ಸೃಷ್ಟಿಯಾಗಲಿಕ್ಕಿದೆ. ಹಾಗೆ ಸೃಷ್ಟಿಯಾಗುವ ಮೆಟ್ರೋ ಜಗತ್ತಿನಲ್ಲಿ ರೈಲು ನೋಡುತ್ತಾ ಕಳೆದು ಹೋಗುವುದಕ್ಕೆ ನಾನು ಕಾತರದಿಂದ ಕಾಯುತ್ತಿದ್ದೇನೆ.

ನಿಮ್ಮ ಟಿಪ್ಪಣಿ ಬರೆಯಿರಿ

Filed under ಸಾಹಿತ್ಯ

ಸಂಧ್ಯಾ ಬರೆದ ಹನಿಗವಿತೆಗಳು


ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಸಂಧ್ಯಾ ಬರೆದ ಕೆಲವು ಹನಿಗವಿತೆಗಳು
ಕೆಲವು ಹನಿಗಳು…

೧.
ಅವನು ಕಡಲು, ನಾನು ದ೦ಡೆ
ಪ್ರತಿಸಾರಿ ಬಳಿಸಾರಿ, ಭೋರ್ಗರೆದು,
ಆವರಿಸಿ ಮರಳುವಾಗಲೂ
ನನ್ನಲ್ಲಿನ ನನ್ನನ್ನು ಇಷ್ಟಿಷ್ಟೇ
ತನ್ನೊ೦ದಿಗೆ ಒಯ್ಯುವ ಅವನ
ತೋಳುಗಳಲ್ಲಿ ಸಾವಿನ ಅ೦ಜಿಕೆ,
ಬದುಕಿನ ಆಕರ್ಷಣೆ!

೨.
ಅವನೇ ಸೆಳೆದನೋ, ನಾನೇ
ಸರಿದೆನೋ
ನದಿ ಕಡಲಿಗಾಗಿ ಅರಸುತ್ತದೆ
ಅ೦ದುಕೊ೦ಡಿದ್ದೆ
ಕಡಲು ನದಿಗಾಗಿ ಕಾಯುತ್ತದೆ
ಅವನೆ೦ದ
ಕಡಲಿಗೆ ನದಿ ಸಿಕ್ಕಿತೋ,
ನದಿಗೆ ಕಡಲು ದಕ್ಕಿತೋ
ಹಾದಿಯಲ್ಲೆಲ್ಲೋ ಕಳೆದುಹೋಗಿದ್ದ
ಕವಿತೆಗಳೆಲ್ಲಾ ಈಗ ನನ್ನ ತೆಕ್ಕೆಯಲ್ಲಿ

೩.
ತೋಳಿನಲಿ ಬಳಸಿ ಹಿಡಿದು
ಬೈತಲೆ ತುದಿಗೆ ಅವ
ತುಟಿ ಒತ್ತಿದ ದಿನ
ಸಿ೦ಧೂರ ಸಹ ತಲೆ ತಗ್ಗಿಸಿ
ಮ೦ಕಾಯಿತು!

ನಿಮ್ಮ ಟಿಪ್ಪಣಿ ಬರೆಯಿರಿ

Filed under ಸಾಹಿತ್ಯ

ಜೀವನದಿಗಳ ಸಾವಿನ ಕಥನ ೫:ಅಣೆಕಟ್ಟೆಂಬ ಅನಾಹುತ


ಆಧುನಿಕ ಜಗತ್ತನ್ನು ಅಭಿವೃದ್ಧಿಯ ಯುಗ ಎಂದು ಕರೆಯುತ್ತಿರುವ ಈ ಸಂದರ್ಭದಲ್ಲಿ ಅಭಿವೃದ್ಧಿ ಕುರಿತಂತೆ ನಿರ್ವಚಿಸುತ್ತಿರುವ ಕ್ರಮ ಕೂಡ ವಿವಾದಕ್ಕೆ ಒಳಗಾಗಿದ್ದು ಈ ಕುರಿತ ನಮ್ಮ ಗ್ರಹಿಕೆ ಬದಲಾಗಬೇಕಾಗಿದೆ. ಎಲ್ಲವನ್ನೂ ವಿಶಾಲ ದೃಷ್ಟಿಕೋನದಿಂದ ನೋಡುವ ಬದಲು, ಸೂಕ್ಷ್ಮ ದೃಷ್ಟಿಕೋನದಿಂದ ನೋಡುವ, ಗ್ರಹಿಸುವ ನೆಲೆಗಟ್ಟು ಇದೀಗ ಅತ್ಯಗತ್ಯವಾಗಿದೆ. ವರ್ತಮಾನದ ಅರ್ಥಶಾಸ್ತ್ರ ಪರಿಭಾಷೆಯಲ್ಲಿ ವ್ಯವಹರಿಸುತ್ತಿರುವ ಜಗತ್ತು, ಸಾಮಾಜಿಕ ಹಾಗೂ ಚಾರಿತ್ರಿಕ ದೃಷ್ಟಿಕೋನದಿಂದಲೂ ತನ್ನನ್ನು ತಾನು ವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.
ಜಗತ್ತಿನ ಯಾವುದೇ ರಾಷ್ಟ್ರವಿರಲಿ, ನದಿಗಳ ಇಂದಿನ ನೈಜಸ್ಥಿತಿಯನ್ನು ಅರಿತಾಗ ನಮ್ಮ ಅಭಿವೃದ್ಧಿ ಕುರಿತಂತೆ ಗ್ರಹಿಕೆಯ ನೆಲೆಗಟ್ಟು ಖಂಡಿತಾ ಬದಲಾಗಬೇಕೆನಿಸುತ್ತದೆ. ಯಾಕೆಂದರೆ, ಯಾವ ಅಡೆ-ತಡೆ ಇಲ್ಲದೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳೆಂಬ ತಡೆಗೋಡೆ ನಿರ್ಮಾಣವಾಗುತ್ತಿದ್ದಂತೆ, ನದಿಪಾತ್ರದ ಪರಿಸರವಷ್ಟೇ ಅಲ್ಲ, ನದಿಗಳ ಮೂಲ ಸ್ವರೂಪ ಹೇಳ ಹೆಸರಿಲ್ಲದಂತೆ ನಾಶವಾಯಿತು. ಅಣೆಕಟ್ಟುಗಳ ನಿರ್ಮಾಣದಿಂದಾಗಿ ಜಗತ್ತಿನಾದ್ಯಂತ ಬಹುತೇಕ ನದಿಗಳಿಗೆ ಸಮುದ್ರ ಸೇರುವ ಸಾಧ್ಯತೆ ಇಲ್ಲವಾಯಿತು. ಅಮೆರಿಕದಲ್ಲಿ ಹರಿಯುವ ಕೊಲರಾಡೊ ನದಿ ೧೯೬೦ರಿಂದೀಚೆಗೆ ತನ್ನ ಸುದೀರ್ಘ ೫೦ ವರ್ಷಗಳಲ್ಲಿ ಪ್ರವಾಹ ಬಂದಾಗ ಎರಡು ಬಾರಿ ಸಮುದ್ರ ಸೇರಿದ್ದು ಬಿಟ್ಟರೆ, ಉಳಿದಂತೆ ಅಣೆಕಟ್ಟುಗಳ ಕೆಳಭಾಗದಲ್ಲೇ ಬತ್ತಿ ಹೋಗುತ್ತಿದೆ. ಇದು ಅಮೆರಿಕಾದ ನದಿಯೊಂದರ ವಸ್ತು ಸ್ಥಿತಿ ಮಾತ್ರವಲ್ಲ, ಜಗತ್ತಿನ ಎಲ್ಲಾ ನದಿಗಳ ಶೋಚನೀಯ ಸ್ಥಿತಿಯೂ ಇದೇ ಆಗಿದೆ.
ಅಣೆಕಟ್ಟುಗಳ ನಿರ್ಮಾಣವಾದ ಮೇಲೆ, ನದಿಗಳ ನೈಜ ಹರಿವಿನ ವೇಗ ಕುಂಠಿತಗೊಂಡು, ಅವುಗಳ ಇಕ್ಕೆಲಗಳ ಮುಖಜಭೂಮಿಯಲ್ಲಿ ಮಣ್ಣಿನ ಫಲವತ್ತತೆಗೆ ಧಕ್ಕೆಯುಂಟಾಯಿತು. ಅಲ್ಲದೆ ನದಿಗಳಲ್ಲಿ ಮೀನುಗಾರಿಕೆಯನ್ನೇ ಕುಲ ಕಸುಬಾಗಿ ಬದುಕುತ್ತಿದ್ದ ಅಸಂಖ್ಯಾತ ಕುಟುಂಬಗಳು ತಮ್ಮ ವೃತ್ತಿ ಬದುಕಿನಿಂದ ವಂಚಿತವಾದವು. ಅಮೆರಿಕಾದಲ್ಲಿ ನದಿಯ ಮಕ್ಕಳೆಂದು ಕರೆಯಲ್ಪಡುತ್ತಿದ್ದ, ಶತಮಾನದ ಹಿಂದೆ ೧೨೦೦ ಕುಟುಂಬಗಳಿದ್ದ ಕುಕುಪಾ ಜನಾಂಗ, ಈಗ ೪೦ ಕುಟುಂಬಗಳಿಗೆ ಇಳಿದಿದ್ದು, ಈ ಆದಿವಾಸಿಗಳು ಮೀನುಗಾರಿಕೆಯಿಂದ ವಂಚಿತರಾಗಿ ಗೆಡ್ಡೆ-ಗೆಣಸುಗಳನ್ನು ನಂಬಿ ಬದುಕುತ್ತಿದ್ದಾರೆ.
ಜಗತ್ತಿನ ಯಾವುದೇ ನದಿಯಿರಲಿ, ಪ್ರತಿ ನದಿಗೂ ಹರಿಯುವಿಕೆಯಲ್ಲಿ, ನೀರಿನ ಗುಣದಲ್ಲಿ, ಉದ್ದ-ವಿಸ್ತಾರದಲ್ಲಿ ತನ್ನದೇ ಆದ ವೈಶಿಷ್ಟವಿರುತ್ತದೆ. ಕೆಲವು ನದಿಗಳು ಕೆಂಪಾಗಿ ರಭಸದಿಂದ ಹರಿಯುವ ಗುಣ ಹೊಂದಿದ್ದರೆ, ಇನ್ನು ಕೆಲವು ನದಿಗಳು ಅತ್ಯಂತ ವಿಶಾಲವಾಗಿ (ಇವುಗಳ ಅಗಲ ೨ ರಿಂದ ೪ ಕಿ.ಮೀ.) ನಿಧಾನವಾಗಿ ಹರಿಯುವ ಗುಣ ಹೊಂದಿವೆ. ಭಾರತದ ಸಂದರ್ಭದಲ್ಲಿ ಬ್ರಹ್ಮಪುತ್ರ ನದಿಗೆ ಇರುವ ವೇಗ, ಗಂಗೆ ಅಥವಾ ಕಾವೇರಿಗೆ ಇಲ್ಲ. ಇಂತಹ ವಿಶಿಷ್ಟ ಗುಣಗಳಿಗೆ ಅನುಗುಣವಾಗಿ ನದಿಪಾತ್ರದಲ್ಲಿ ಜೈವಿಕ ವೈವಿಧ್ಯತೆ, ಪರಿಸರ, ಕೃಷಿ ಚಟುವಟಿಕೆ ರೂಪುಗೊಂಡಿರುತ್ತದೆ.
ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣದಿಂದ ಆದ ಅತ್ಯಂತ ದೊಡ್ಡ ಅನಾಹುತವೆಂದರೆ, ಹಲವಾರು ಜಾತಿಯ ಮೀನುಗಳ ವಿನಾಶ. ವಂಶಾಭಿವೃದ್ಧಿಗಾಗಿ ನದಿಗಳಲ್ಲಿ ಸಾವಿರಾರು ಕಿ.ಮೀ. ಈಜಿ, ಮೊಟ್ಟೆ ಇಟ್ಟು ಮರಿ ಮಾಡುತ್ತಿದ್ದ ಮೀನುಗಳ ಸಂತತಿ ಹಾಗೂ ಸಮುದ್ರದ ಉಪ್ಪು ನೀರಿನಿಂದ ನದಿಗಳ ಸಿಹಿ ನೀರಿಗೆ ಆಗಮಿಸಿ, ವಂಶವನ್ನು ವೃದ್ಧಿಸುತ್ತಿದ್ದ ಅನೇಕ ಮೀನುಗಳ ಸಂತತಿ ಈಗ ಕೇವಲ ನೆನಪು ಮಾತ್ರ.
ಇತ್ತೀಚೆಗೆ ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಕುರಿತಂತೆ ಗಂಭೀರ ಅಧ್ಯಯನ ನಡೆಯುತ್ತಿದ್ದು, ಸಂಗ್ರಹವಾದ ನೀರಿನ ಗುಣ, ಉಷ್ಣಾಂಶಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದು ದೃಢಪಟ್ಟಿದೆ. ಅಲ್ಲದೆ ಜಲಾಶಯದ ನೀರು ಹಲವಾರು ತಿಂಗಳ ಕಾಲ ಶೇಖರವಾಗುವುದರಿಂದ, ನೀರಿನ ಕೊಳೆಯುವಿಕೆಯ ಪ್ರಕ್ರಿಯೆಯಿಂದಾಗಿ ಅನೇಕ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.
ಸ್ಪೀಡನ್ ಮೂಲದ ಪರಿಸರ ತಜ್ಞರು, ಏಷ್ಯಾ, ಅಮೆರಿಕಾ, ಆಫ್ರಿಕಾ ಖಂಡಗಳು ಸೇರಿದಂತೆ ಜಗತ್ತಿನಾದ್ಯಂತ ನೂರಾರು ನದಿಗಳಲ್ಲಿ ಈ ಕುರಿತು ಅಧ್ಯಯನ ಕೈಗೊಂಡು, ನೀರಿನ ಮೂಲ ಗುಣದ ಬದಲಾವಣೆಯ ಬಗ್ಗೆ ಖಚಿತಪಡಿಸಿದ್ದಾರೆ. ಇದರಿಂದಾಗಿ ನಿಖರವಾದ ಪರಿಣಾಮ ಅರಿಯಬೇಕಾದರೆ ಕನಿಷ್ಠ ೭೫ ರಿಂದ ೯೦ ವರ್ಷ ನಾವು ಕಾಯಬೇಕು ಎಂದಿದ್ದಾರೆ. ಈಗಾಗಲೇ ಸಂಗ್ರಹವಾದ ನದಿನೀರಿನಲ್ಲಿರುವ ಖನಿಜಾಂಶಗಳು ಜಲಾಶಯದಲ್ಲಿ ಕರಗುವುದರಿಂದ ಲವಣಾಂಶ ಹೆಚ್ಚುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಅಣೆಕಟ್ಟು ಮತ್ತು ಜಲಾಶಯಗಳಿಂದ ಆದ ಮತ್ತೊಂದು ನೈಸರ್ಗಿಕ ದುರಂತವೆಂದರೆ, ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋದ ಅರಣ್ಯ ಹಾಗೂ ಅಪರೂಪದ ಗಿಡ ಮೂಲಿಕೆಯ ಸಸ್ಯ ಸಂತತಿ. ಈಗಾಗಲೇ ವಿಶ್ವದಾದ್ಯಂತ ೪೫ ಸಾವಿರ ಚ.ಕಿ.ಮೀ. ಅರಣ್ಯ ಪ್ರದೇಶ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಗಿದೆ.
ಶ್ರೀಲಂಕಾದಲ್ಲಿ ನಿರ್ಮಿಸಿದ ೫ ಜಲಾಶಯಗಳಿಂದಾಗಿ ೮ ಅಪರೂಪದ ಜೀವಿಗಳ ಸಂತತಿ ವಿನಾಶದ ಅಂಚಿಗೆ ತಲುಪಿವೆ. ಇವುಗಳಲ್ಲಿ ಕೆಂಪುಮೂತಿಯ ಲಂಗೂರ್ (ಮಂಗ ಪ್ರಭೇದ) ಸಹ ಸೇರಿದೆ. ಜೊತೆಗೆ ೮೦೦ ಆನೆಗಳಿಗೆ ವಲಸೆ ಹೋಗುವ ದಾರಿ ಬಂದಾಗಿ ಅವುಗಳು ಅತಂತ್ರವಾಗಿವೆ. ಇವು ಪರಿಸರ ಮತ್ತು ಪ್ರಾಣಿಗಳ ಕುರಿತ ಕತೆಯಾದರೆ, ಅಣೆಕಟ್ಟು ನಿರ್ಮಾಣದಿಂದ ನಿರ್ವಸತಿಗರಾದ ಜನತೆಯ ನೋವು ಜಗತ್ತಿನಾದ್ಯಂತ ಅರಣ್ಯರೋದನವಾಗಿದೆ.
ಇಂತಹ ಯೋಜನೆಗಳ ಫಲವಾಗಿ ಸ್ಥಳೀಯರನ್ನು ಒಕ್ಕಲೆಬ್ಬಿಸಿ, ಬೇರೆಡೆ ನಿವೇಶನ, ಭೂಮಿ ನೀಡಿದ್ದರೂ ಸಹ ಅವೆಲ್ಲಾ ಅರಣ್ಯ ಪ್ರದೇಶವೇ ಆಗಿವೆ. ಒಂದೆಡೆ ಹಿನ್ನೀರಿನಲ್ಲಿ, ಮತ್ತೊಂದೆಡೆ ಜನವಸತಿ ಪ್ರದೇಶದ ನೆಪದಲ್ಲಿ ಅರಣ್ಯ ಭೂಮಿಯ ವಿಸ್ತಾರ ಕುಗ್ಗುತ್ತಿದ್ದು, ಅರಣ್ಯಜೀವಿಗಳೆಲ್ಲಾ ನಾಡಿನತ್ತ ಮುಖಮಾಡತೊಡಗಿವೆ. ಇವುಗಳ ಜೊತೆ ನಿಸರ್ಗದ ಮಡಿಲಲ್ಲಿ, ಸ್ವಚ್ಛಂದವಾಗಿ ಧುಮ್ಮಿಕ್ಕಿ ಹರಿವ ನದಿಗಳ ಜಲಧಾರೆಯಿಂದ ಕಂಗೊಳಿಸುತ್ತಿದ್ದ ಜಲಪಾತಗಳೆಲ್ಲಾ ಈಗ ಕಣ್ಮರೆಯಾಗುತ್ತಿವೆ. ಮಳೆಗಾಲದಲ್ಲಿ ನದಿಯ ಪ್ರವಾಹದ ಪರಿಣಾಮ, ಜಲಾಶಯದಿಂದ ಬಿಡುಗಡೆಗೊಂಡ ನೀರಿನಿಂದಾಗಿಕೆಲವು ಕಾಲ ಜೀವಂತವಾಗಿರುವ ಇವು ಉಳಿದ ಋತುಮಾನಗಳಲ್ಲಿ ಅವಶೇಷಗಳಂತೆ ಕಾಣುತ್ತವೆ. ಇಂದು ಬಹುತೇಕ ಜಲಪಾತಗಳು ತಮ್ಮ ಹಿಂದಿನ ವೈಭವವನ್ನು ಕಳೆದುಕೊಂಡಿವೆ.
ಜಲಾಶಯಗಳ ನಿರ್ಮಾಣದಿಂದಾಗಿ ನದಿ ನೀರಿನಲ್ಲಿದ್ದ ಖನಿಜ ಮತ್ತು ಲವಣಾಂಶಗಳ ನಷ್ಟ ಮತ್ತೊಂದು ಬಗೆಯ ದುರಂತ.
ಪರ್ವತ ಗಿರಿ ಶ್ರೇಣಿಗಳಿಂದ ಹರಿಯುತ್ತಿದ್ದ ನೀರಿನಲ್ಲಿದ್ದ ಖನಿಜ-ಲವಣಾಂಶಗಳು ಜಲಚರಗಳಿಗೆ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ ನದಿ ತೀರಗಳಿಗೆ ಗಟ್ಟಿತನವನ್ನು ಒದಗಿಸಿ, ಭೂ ಸವೆತವನ್ನು ತಡೆಗಟ್ಟುತ್ತಿತ್ತು. ಯಾವಾಗ ಜಲಾಶಯಗಳು ನಿರ್ಮಾಣವಾದವೋ, ನದಿ ನೀರಿನ ಖನಿಜ, ಲವಣಾಂಶಗಳೆಲ್ಲಾ ಜಲಾಶಯದ ತಳಭಾಗ ಸೇರಿ, ಶೇಖರವಾಗುತ್ತಿರುವ ಹೂಳಿನಲ್ಲಿ ಮಿಶ್ರವಾಗಿ, ಸಿಹಿ ನೀರನ್ನು ಉಪ್ಪು ನೀರನ್ನಾಗಿ ಪರಿವರ್ತಿಸಿದವು. ಇದಲ್ಲದೆ ಅಣೆಕಟ್ಟು ನಿರ್ಮಾಣದಿಂದ ನದಿಯ ತೀರಗಳು ಶಿಥಿಲಗೊಂಡವಲ್ಲದೆ, ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಹೊರಬಿಟ್ಟ ನೀರಿನ ಜೊತೆ ಹೂಳೂ ಸೇರಿ ನದಿಯ ಇಕ್ಕೆಲಗಳ ಫಲವತ್ತಾದ ಭೂಮಿಯನ್ನು ಚೌಳುಭೂಮಿಯನ್ನಾಗಿ ಮಾಡಿದವು. ಅಣೆಕಟ್ಟು ನಿರ್ಮಾಣಕ್ಕೆ ಮೊದಲು ನದಿಗಳು ನೀರಿನ ಜೊತೆ ತಂದು ಹಾಕುತ್ತಿದ್ದ ಮೆಕ್ಕಲು ಮಣ್ಣಿನಿಂದ ಈ ಭೂಮಿಗಳು ವಂಚಿತವಾದವು.
ಅಮೆರಿಕಾದ ಕೊಲರಾಡೊ ನದಿಗೆ ಕಟ್ಟಿದ ಹೂವರ್ ಅಣೆಕಟ್ಟಿನ ಜಲಾಶಯದ ಕೆಳಭಾಗದ ೧೪೫ ಕಿ.ಮೀ. ಉದ್ದಕ್ಕೂ ೧೧೦ ದಶಲಕ್ಷ ಕ್ಯೂಬಿಕ್ ಮೀಟರ್ ಸವಕಲು ಮಣ್ಣು ಸಮುದ್ರ ಸೇರಿದೆ. ಅಲ್ಲದೆ ನದಿಯ ಆಳ ಕೇವಲ ೧೨ ಅಡಿಗೆ ಸೀಮಿತಗೊಂಡಿದೆ.
ಈಜಿಪ್ಟ್‌ನ ನೈಲ್ ನದಿ ಅಲ್ಲಿನ ಕೃಷಿಕರ ಪಾಲಿಗೆ ವರದಾನವಾಗಿತ್ತು. ಪ್ರತಿ ವರ್ಷ ಪ್ರವಾಹದ ವೇಳೆ ಅದು ಹೊತ್ತು ತರುತ್ತಿದ್ದ ಫಲವತ್ತಾದ ಮೆಕ್ಕಲು ಮಣ್ಣು ಕೃಷಿ ಚಟುವಟಿಕೆಗೆ ಯೋಗ್ಯ ಗೊಬ್ಬರದಂತೆ ಬಳಕೆಯಾಗುತ್ತಿತ್ತು. ಆದರೆ ಈ ನದಿಗೆ ನಾಸರ್ ಅಣೆಕಟ್ಟು ನಿರ್ಮಾಣವಾದ ನಂತರ, ನದಿ ನೀರಿನಲ್ಲಿ ಹರಿಯುವ ಖನಿಜ-ಲವಣಾಂಶದ ಬದಲು, ಜಲಾಶಯದ ನೀರಿನಲ್ಲಿರುವ ಅಲ್ಯುಮಿನಿಯಂ ಮತ್ತು ಕಬ್ಬಿಣಾಂಶ ರೈತರ ಕೃಷಿಭೂಮಿಗೆ ಜಮೆಯಾಗತೊಡಗಿವೆ. ಕೃಷಿ ಭೂಮಿಯಲ್ಲಿನ ಈ ಅಂಶಗಳನ್ನು ತಗ್ಗಿಸಲು ರೈತರು ವಿವಿಧ ರಾಸಾಯನಿಕಗಳನ್ನು ಬಳಸುತ್ತಾ ಬಸವಳಿದಿದ್ದಾರೆ. ಭೂಮಿ ಕೂಡ ಬಂಜರಾಗಿ ಪರಿವರ್ತನೆಯಾಗುತ್ತಿದೆ.
ಅಮೆರಿಕಾ-ಕೆನಡಾ ನಡುವೆ ಹರಿಯುವ ಮಿಸಿಸಿಪ್ಪಿ ನದಿಗೆ ಮಿಸ್ಸಾರಿ ಎಂಬಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ, ೧೯೫೩ ರಿಂದ ಇಲ್ಲಿಯವರೆಗೆ ಈ ಅಣೆಕಟ್ಟಿನ ಪ್ರಭಾವದಿಂದಾಗಿ (ಲೂಸಿಯಾನ) ಅಂದರೆ ಜಲಾಶಯದ ಕೆಳಗಿನ ಪ್ರಾಂತ್ಯದಲ್ಲಿ ಜಲಾಶಯದಿಂದ ಬಿಡುಗಡೆ ಮಾಡಿದ ನೀರಿನ ರಭಸಕ್ಕೆ ೧೦ ಸಾವಿರ ಹೆಕ್ಟೇರ್ ಭೂಮಿ ನದಿ ನೀರಿನಲ್ಲಿ ಕೊಚ್ಚಿಹೋಗುವುದರ ಜೊತೆಗೆ ಇದರಲ್ಲಿ ಅರ್ಧದಷ್ಟು ಭೂಮಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದಿದೆ.
ಸಹಜವಾಗಿ ಸಮುದ್ರ ಸೇರುತ್ತಿದ್ದ ನದಿಗಳ ಸಹಜ ಪ್ರಕ್ರಿಯೆ ಸ್ಥಗಿತಗೊಂಡ ನಂತರ, ಅನೇಕ ಕಡಲ ತೀರಗಳು ತಮ್ಮ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಂಡು ವಿಕೃತ ರೂಪ ತಾಳಿವೆ. ಇವುಗಳ ಸೌಂದರ್ಯೀಕರಣಕ್ಕಾಗಿ ಸರಕಾರಗಳು ಕೋಟ್ಯಂತರ ಡಾಲರ್ ವ್ಯಯ ಮಾಡುತ್ತಿವೆ.

ನಿಮ್ಮ ಟಿಪ್ಪಣಿ ಬರೆಯಿರಿ

Filed under ಸಾಹಿತ್ಯ

ಲೋಕಜ್ಞಾನಕ್ಕಾಗಿ ವಿಜ್ಞಾನ: ಹೈಸೆನ್‌ಬರ್ಗ್ ಭಾಷಣ ತಿರುಮಲೇಶ್ ಅನುವಾದ


ವಿಜ್ಞಾನ ಬೇರೆ ಬೇರೆ ಪ್ರದೇಶಗಳ ಜನರ ನಡುವಣ ಸೇತುವಾಗಿರಬೇಕು ಹಾಗೂ ಅಂತಾರಾಷ್ಟ್ರೀಯ ತಿಳುವಳಿಕೆಯನ್ನು ಹೆಚ್ಚಿಸಬೇಕು ಎಂದು ಆಗಾಗ ಹೇಳುವುದಿದೆ. ವಿಜ್ಞಾನ ಅಂತಾರಾಷ್ಟ್ರೀಯವಾದುದು, ಹಾಗೂ ಅದು ಮನುಷ್ಯನ ವಿಚಾರಗಳನ್ನು ಯಾವ ವಿಷಯಗಳು ಎಲ್ಲಾ ಜನರೂ ಅರಿಯುತ್ತಾರೋ ಮತ್ತು ಯಾವುದರ ಪರಿಹಾರದಲ್ಲಿ ಅತ್ಯಂತ ವಿಭಿನ್ನವಾದ ಭಾಷೆಗಳ, ಜನಾಂಗಗಳ ಅಥವಾ ಧರ್ಮಗಳ ವಿಜ್ಞಾನಿಗಳು ಸಮನಾಗಿ ಭಾಗವಹಿಸಬಲ್ಲರೋ ಅಂಥ ವಿಷಯಗಳ ಕಡೆಗೆ ಹರಿಯಿಸುತ್ತದೆ ಎಂದೂ ಪದೇ ಪದೇ, ಹೆಚ್ಚು ಸಮರ್ಥನೀಯವಾಗಿ, ಹೇಳಲಾಗುತ್ತಿದೆ. ಈ ಪ್ರತ್ಯೇಕ ಕಾಲದಲ್ಲಿ ನಾನು ವಿಜ್ಞಾನದ ಪಾತ್ರದ ಬಗ್ಗೆ ನಿಮ್ಮನ್ನು ಉದ್ದೇಶಿಸಿ ಮಾತಾಡುವುದರಲ್ಲಿ ಸಂಗತಿಗಳನ್ನು ನಮಗೆ ನಾವೇ ಅತಿ ಸುಲಭವಾಗಿ ಮಾಡಿಕೊಳ್ಳಬಾರದು ಎನ್ನುವುದು ಮುಖ್ಯ. ವಿಜ್ಞಾನವೆನ್ನುವುದು ರಾಷ್ಟ್ರೀಯವಾದುದು ಮತ್ತು ಬೇರೆ ಬೇರೆ ಜನಾಂಗಗಳ ವಿಚಾರಗಳು ಮೂಲಭೂತವಾಗಿಯೂ ವಿಭಿನ್ನ ಎಂಬ, ನಮ್ಮ ಕಿವಿಯಲ್ಲಿನ್ನೂ ಮೊಳಗುತ್ತಿರುವ, ವಿರುದ್ಧ ಸಿದ್ಧಾಂತವನ್ನೂ ನಾವು ಚರ್ಚಿಸಬೇಕು. ವಿಜ್ಞಾನ ನಮ್ಮದೇ ಜನರಿಗೋಸ್ಕರ ಪ್ರಥಮವಾಗಿ ದುಡಿಯಬೇಕು ಮತ್ತು ನಮ್ಮದೇ ರಾಜಕೀಯ ಶಕ್ತಿಗೆ ಸಹಾಯ ಮಾಡಬೇಕು ಎಂದು ನಂಬಲಾಗಿತ್ತು: ವಿಜ್ಞಾನ ಎಲ್ಲಾ ತಾಂತ್ರಿಕ ಬೆಳವಣಿಗೆಗಳದ್ದೂ ತಳಪಾಯವಾಗಿದೆ, ಆದ ಕಾರಣ ಅದು ಎಲ್ಲಾ ಪ್ರಗತಿಯದೂ, ಹಾಗೂ ಎಲ್ಲಾ ಸೈನಿಕ ಶಕ್ತಿಯದೂ ತಳಪಾಯ. ಎಲ್ಲಾ ಶುದ್ಧ ವಿಜ್ಞಾನಗಳ ಮತ್ತು ತತ್ವಜ್ಞಾನದ ಕೆಲಸವೆಂದರೆ ನಮ್ಮ ಲೋಕದೃಷ್ಟಿಯನ್ನೂ (Weltanschauung) ನಂಬಿಕೆಗಳನ್ನೂ ಬೆಂಬಲಿಸುವುದು ಎಂದು ಕೂಡಾ ಹೇಳಲಾಗುತ್ತಿತ್ತು. ಪ್ರತಿಯಾಗಿ ಇವುಗಳನ್ನೇ ರಾಜಕೀಯ ಪ್ರಾಬಲ್ಯದ ಅಡಿಗಲ್ಲುಗಳು ಎಂದು ನಮ್ಮದೇ ಜನರ ನಡುವೆ ತಿಳಿದುಕೊಳ್ಳಲಾಗಿತ್ತು. ಈ ಎರಡು ದೃಷ್ಟಿಗಳಲ್ಲಿ ಯಾವುದು ಸರಿ ಹಾಗೂ ಅವುಗಳನ್ನು ಬೆಂಬಲಿಸುವ ವಾದಗಳ ತೌಲನಿಕ ಗುಣಗಳೇನು ಎನ್ನುವುದನ್ನು ನಾನು ಚರ್ಚಿಸಬಯಸುವೆ.
-I-
ಈ ವಿಷಯದಲ್ಲಿ ಸ್ಪಷ್ಟತೆ ಗಳಿಸಲು ಮೊದಲಾಗಿ ನಾವು ವಿಜ್ಞಾನ ಹೇಗೆ ನಡೆಯುತ್ತದೆ, ಒಬ್ಬ ವ್ಯಕ್ತಿ ಹೇಗೆ ವೈಜ್ಞಾನಿಕ ಸಮಸ್ಯೆಗಳ ಕಡೆ ಕರೆತರಲ್ಪಡುತ್ತಾನೆ ಮತ್ತು ಅವು ಹೇಗೆ ಅವನ ಆಸಕ್ತಿಗಳನ್ನು ಕೆರಳಿಸುತ್ತವೆ ಎಂದು ತಿಳಿಯಬೇಕಾಗುತ್ತದೆ. ನನ್ನದೇ ವಿಜ್ಞಾನ ಮಾತ್ರ ನನಗೆ ಚೆನ್ನಾಗಿ ಗೊತ್ತಿರುವುದಾದ್ದರಿಂದ, ನಾನು ಅಣು ಭೌತವಿಜ್ಞಾನದ ಬಗ್ಗೆ ಮಾತಾಡಿದರೆ, ಒಬ್ಬ ವಿದ್ಯಾರ್ಥಿಯಾಗಿ ನನ್ನದೇ ಅನುಭವಗಳನ್ನು ನೆನೆಪಿಗೆ ತಂದುಕೊಂಡರೆ, ನೀವು ತಪ್ಪು ತಿಳಿಯಬಾರದು.
೧೯೨೦ರಲ್ಲಿ ನಾನು ಮ್ಯೂನಿಕ್ ವಿಶ್ವವಿದ್ಯಾಲಯ ಸೇರಲೆಂದು ಶಾಲೆ ತೊರೆದಾಗ ನಾಗರಿಕರಾಗಿ ನಮ್ಮ ಯುವ ಪೀಳಿಗೆಯ ಸ್ಥಿತಿ ಇಂದು ಅದು ಹೇಗಿದೆಯೋ ಹಾಗೇ ಇತ್ತು. ಮೊದಲ ಮಹಾಯುದ್ಧದ ಸೋಲು ಆ ಯುದ್ಧದ ಉದ್ದಕ್ಕೂ ಬಳಸಿದ್ದ ಎಲ್ಲಾ ಆದರ್ಶಗಳ ಕುರಿತಾಗಿಯೂ ನಮ್ಮಲ್ಲಿ ಆಳವಾದೊಂದು ಸಂದೇಹವನ್ನು ಉಂಟುಮಾಡಿತ್ತು. ಈಗ ಅವು ಟೊಳ್ಳಾಗಿ ತೋರಿದುವು ಮತ್ತು ಈ ಜಗತ್ತಿನಲ್ಲಿ ಮೌಲಿಕವಾದುದು ಯಾವುದು, ಮೌಲಿಕವಲ್ಲದೆ ಇರುವುದು ಯಾವುದು ಎಂಬುದನ್ನು ನಾವಾಗಿ ಕಂಡುಕೊಳ್ಳಲು ಬಯಸಿದೆವು; ನಮಗೆ ನಮ್ಮ ಹೆತ್ತವರ ಅಥವಾ ಅಧ್ಯಾಪಕರ ಮೇಲೆ ಅವಲಂಬಿಸುವುದು ಬೇಕಿರಲಿಲ್ಲ. ಈ ವಿಧಾನದಲ್ಲಿ ನಾವು ಇತರ ಮೌಲ್ಯಗಳ ಜತೆ ವಿಜ್ಞಾನವನ್ನೂ ಪುನರಪಿ ಕಂಡುಕೊಂಡೆವು. ಕೆಲವೊಂದು ಜನಪ್ರಿಯ ಪುಸ್ತಕಗಳನ್ನು ಅಭ್ಯಾಸ ಮಾಡಿದ ನಂತರ ನಾನು ಅಣು ವಿಜ್ಞಾನಕ್ಕೆ ಸಂಬಂಧಿಸಿದ ವಿಜ್ಞಾನ ಶಾಖೆಯಲ್ಲಿ ಆಸಕ್ತಿ ವಹಿಸಲು ಸುರುಮಾಡಿದೆ, ಮತ್ತು ಸ್ಥಳ ಮತ್ತು ಕಾಲದ ಬಗ್ಗೆ ಸಾಪೇಕ್ಷಸಿದ್ಧಾಂತದಲ್ಲಿ ಮಾಡಲಾಗುತ್ತಿದ್ದ ವಿಚಿತ್ರ ಹೇಳಿಕೆಗಳ ಕುರಿತಾಗಿ ಒಂದು ಅಭಿಪ್ರಾಯ ತಳೆಯಲು ಬಯಸಿದೆ. ಈ ರೀತಿ ನಾನು ನನ್ನ ಮುಂದಿನ ಅಧ್ಯಾಪಕರಾದ ಸೋಮರ್‌ಫೆಲ್ಡ್ ಅವರ ಪಾಠಗಳನ್ನು ಆಲಿಸಲು ಸುರುಮಾಡಿದೆ. ನನ್ನ ಈ ಆಸಕ್ತಿಗೆ ಉತ್ತೇಜನ ನೀಡಿದವರು ಅವರೇ. ಅವರಿಂದಲೇ ನಾನು ಆ ಟರ್ಮಿನಲ್ಲಿ ಅಣುವಿನ ಕುರಿತಾದ ಹೊಸ ಹಾಗೂ ಆಳವಾದ ಅರಿವು ಹೇಗೆ ರೋಂಟ್ಜೆನ್, ಪ್ಲಾಂಕ್, ರೂಥರ್‌ಫೋರ್ಡ್, ಮತ್ತು ಬೋರ‍್ಹ್‌ರ ಸಂಶೋಧನೆಗಳಿಂದ ಬೆಳೆದು ಬಂದಿದೆ ಎನ್ನುವುದನ್ನು ಕಲಿತದ್ದು. ಡೇನ್ ನೀಲ್ಸ್ ಬೋರ‍್ಹ್ ಮತ್ತು ಇಂಗ್ಲಿಷ್‌ಮನ್ ಲಾರ್ಡ್ ಲೂಥರ್‌ಫೋರ್ಡ್ ಅಣುವನ್ನೊಂದು ಚಿಕ್ಕ ರೂಪದ ಸೌರವ್ಯೂಹ ವ್ಯವಸ್ಥೆಯಾಗಿ ಕಲ್ಪಿಸಿದ್ದರು, ಹಾಗೂ ಮುಂದೆ ಭವಿಷ್ಯದಲ್ಲಿ ಮೂಲ ಧಾತುಗಳ ಎಲ್ಲಾ ರಾಸಾಯನಿಕ ಗುಣಗಳನ್ನು ಬೋರ‍್ಹ್‌ನ ಸಿದ್ಧಾಂತದ ಸಹಾಯದಿಂದ ಇಲೆಕ್ಟ್ರಾನ್‌ಗಳ ಚಲನ ವರ್ತುಲಗಳನ್ನು ಉಪಯೋಗಿಸಿ ಮುನ್ಸೂಚಿಸಬಹುದಾದ ಸಾಧ್ಯತೆಯಿದೆ ಎನ್ನುವುದನ್ನು ನಾನು ಕಲಿತೆ. ಹೇಗಿದ್ದರೂ, ಆ ಕಾಲದಲ್ಲಿ ಅದಿನ್ನೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಕೊನೆಯ ಸಂಗತಿ ಸಹಜವಾಗಿಯೂ ನನ್ನ ಆಸಕ್ತಿಯನ್ನು ತೀವ್ರವಾಗಿ ಸೆಳೆಯಿತು. ಬೋರ‍್ಹ್‌ನ ಪ್ರತಿಯೊಂದೂ ಹೊಸ ಕಾರ್ಯ ಮ್ಯೂನಿಕ್ ಸೆಮಿನಾರಿನಲ್ಲಿ ಜೋರಾಗಿಯೂ ಭಾವಸ್ಪರ್ಶಿಯಾಗಿಯೂ ಚರ್ಚೆಗೆ ಒಳಗಾಗುತ್ತಿತ್ತು. ಸೋಮರ್‌ಫೆಲ್ಡ್ ನನ್ನನ್ನು ೧೯೨೧ರ ಬೇಸಿಗೆಯಲ್ಲಿ ತಮ್ಮ ಜತೆ ಗೋಟಿಂಗೆನ್‌ಗೆ ಬೋರ‍್ಹ್ ತನ್ನ ಅಣುಸಿದ್ಧಾಂತದ ಬಗ್ಗೆ ನೀಡಲಿದ್ದ ಭಾಷಣಮಾಲಿಕೆ ಕೇಳಲು ಬರಹೇಳಿದಾಗ ನನಗದು ಎಷ್ಟು ಮುಖ್ಯವಾಯಿತು ಎನ್ನುವುದನ್ನು ನೀವು ಊಹಿಸಿಕೊಳ್ಳಬಹುದು. ಮುಂದೆ ಯಾವತ್ತೂ ಬೋರ‍್ಹ್ ಉತ್ಸವವೆಂದೇ ಕರೆಯಲ್ಪಡುವ ಈ ಭಾಷಣಮಾಲಿಕೆ ಹಲವು ವಿಧಗಳಲ್ಲಿ ವಿಜ್ಞಾನದ ಕುರಿತು ನನ್ನ ಭಾವೀ ಧೊರಣೆಯನ್ನು ನಿರ್ಧರಿಸಿತು, ಅದರಲ್ಲೂ ಮುಖ್ಯವಾಗಿ ಭೌತ ವಿಜ್ಞಾನದ ಕುರಿತು.
ಮೊತ್ತ ಮೊದಲನೇದಾಗಿ, ಬೋರ‍್ಹ್ ಭಾಷಣಗಳಲ್ಲಿ ನಾವು ಕಾಣಬಹುದಾದ್ದು, ಈ ಸಮಸ್ಯೆಗಳ ಜತೆ ಸೆಣಸಾಡಿದ ಮತ್ತು ಇಡೀ ಜಗತ್ತಿನಲ್ಲಿ ಬೇರೆ ಯಾರೊಬ್ಬನಿಗಿಂತಲೂ ಜಾಸ್ತಿ ಇವುಗಳ ಬಗ್ಗೆ ಅರಿತುಕೊಂಡಂಥ ಮನುಷ್ಯನೊಬ್ಬನ ವಿಚಾರಗಳ ಶಕ್ತಿ. ಎರಡನೇದಾಗಿ ಹೇಳುವುದಾದರೆ, ಬೋರ‍್ಹ್ ಪ್ರಸ್ತುತಪಡಿಸುವುದಕ್ಕಿಂತ ಭಿನ್ನವಾಗಿ ನಾನು ಈ ಮೊದಲೇ ಅಭಿಪ್ರಾಯ ರೂಪಿಸಿಕೊಂಡಿದ್ದಂಥ ಕೆಲವು ವಿಷಯಗಳಿದ್ದುವು. ಈ ವಿಷಯಗಳು ರ‍್ಹೋನ್ ಮತ್ತು ಹೈನ್‌ಬರ್ಗ್‌ಗೆ ಹೋಗುವ ದೀರ್ಘ ಕಾಲ್ನಡೆ ದಾರಿಗಳಲ್ಲಿ ಝಟಾಪಟಿಗೆ ಒಳಗಾದುವು.
ಈ ಮಾತುಕತೆಗಳು ಆಳವಾದ ಪ್ರಭಾವವೊಂದನ್ನು ನನ್ನ ಮನಸ್ಸಿನಲ್ಲಿ ಬಿಟ್ಟು ಹೋದುವು. ಮೊದಲನೇದಾಗಿ, ಅಣು ರಚನೆಯನ್ನು ಅರಿತುಕೊಳ್ಳಲು ಪ್ರಯತ್ನಿಸುವಲ್ಲಿ ಮನುಷ್ಯನೊಬ್ಬ ಜರ್ಮನೋ, ಡೇನಿಷೋ ಅಥವಾ ಇಂಗ್ಲಿಷೋ ಎನ್ನುವುದು ವ್ಯಕ್ತವಾಗಿಯೂ ಅಪ್ರಸ್ತುತ. ನಾನು ಇನ್ನೊಂದನ್ನೂ ಅರಿತೆ, ಬಹುಶಃ ಇದಕ್ಕಿಂತಲೂ ಮುಖ್ಯವಾದ್ದು: ವಿಜ್ಞಾನದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ಬಗ್ಗೆ ತೀರ್ಮಾನವೊಂದನ್ನು ಯಾವಾಗಲೂ ತಲುಪಬಹುದು. ಅದು ನಂಬಿಕೆಯ ಅಥವಾ ಲೋಕದೃಷ್ಟಿಯ ಅಥವಾ ಊಹಾಸಿದ್ಧಾಂತದ ಪ್ರಶ್ನೆಯಲ್ಲ; ಬದಲು ಒಂದು ನಿರ್ದಿಷ್ಟ ಹೇಳಿಕೆ ಸರಳ ಮಾತಿನಲ್ಲಿ ಸರಿ, ಇಲ್ಲವೇ ಸರಳ ಮಾತಿನಲ್ಲಿ ತಪ್ಪು ಇರುತ್ತದೆ ಎನ್ನುವುದು. ವ್ಯಕ್ತಿಯ ಮೂಲವಾಗಲಿ ಕುಲವಾಗಲಿ ಇದನ್ನು ನಿರ್ಧರಿಸುವುದಿಲ್ಲ: ಇದನ್ನು ನಿರ್ಧರಿಸುವುದು ಪ್ರಕೃತಿ, ಅಥವಾ ನೀವು ಬಯಸುವುದಾದರೆ, ದೇವರು, ಮನುಷ್ಯನಂತೂ ಅಲ್ಲ.
ಈ ಅನುಭವಗಳಿಂದ ಶ್ರೀಮಂತನಾಗಿ ನಾನು ಮ್ಯೂನಿಕ್‌ಗೆ ಮರಳಿದೆ ಹಾಗೂ ಸೋಮರ್‌ಫೆಲ್ಡ್ ಅವರ ನಿರ್ದೇಶನದಲ್ಲಿ ಆಣ್ವಿಕ ರಚನೆಗಳ ಮೇಲೆ ನನ್ನದೇ ಪ್ರಯೋಗಗಳನ್ನು ಕೈಗೊಂಡೆ. ನನ್ನ ಡಾಕ್ಟರಲ್ ಪರೀಕ್ಷೆ ಮುಗಿಸಿದ ನಂತರ ನಾನು ಕೋಪೆನ್‌ಹೇಗನ್‌ಗೆ ತೆರಳಿದೆ, ೧೯೨೪ರ ವೈಶಾಖದಲ್ಲಿ, ರಾಕ್‌ಫೆಲ್ಲರ್ ಸಹಾಯಧನದೊಂದಿಗೆ, ಬೋರ‍್ಹ್ ಜತೆ ಕೆಲಸ ಮಾಡುವುದಕ್ಕೆ. ಅಲ್ಲಿ ನಾನು ಅತ್ಯಂತ ವಿಭಿನ್ನ ರಾಷ್ಟಗಳಿಂದ ಬಂದಂಥ ಯುವಜನರದೊಂದು ವರ್ತುಲ ಸೇರಿದೆ-ಇಂಗ್ಲಿಷ್, ಅಮೇರಿಕನ್, ಸ್ವೀಡಿಷ್, ನೋರ್ವೇಜಿಯನ್, ಡಚ್ ಮತ್ತು ಜಪಾನೀ-ಅವರೆಲ್ಲರೂ ಒಂದೇ ಸಮಸ್ಯೆಯ ಮೇಲೆ ಕೆಲಸ ಮಾಡಲು ಬಯಸಿದ್ದರು, ಎಂದರೆ ಬೋರ‍್ಹ್‌ನ ಅಣುಸಿದ್ಧಾಂತದ ಮೇಲೆ. ಎಲ್ಲರೂ ಯಾವಾಗಲೂ ಒಂದು ದೊಡ್ಡ ಪರಿವಾರದವರ ತರ ಒಟ್ಟಾಗಿ ಇರುತ್ತಿದ್ದರು, ಪ್ರವಾಸದಲ್ಲಿ, ಸಾಮಾಜಿಕ ಕೂಟಗಳಲ್ಲಿ, ಮತ್ತು ಆಟೋಟಗಳಲ್ಲಿ. ಭೌತ ವಿದ್ವಾಂಸರ ಈ ವರ್ತುಲದಲ್ಲಿ ಬೇರೆ ಬೇರೆ ರಾಷ್ಟ್ರಗಳಿಂದ ಬಂದಿದ್ದ ಜನರನ್ನು ಮತ್ತು ಅವರ ಯೋಚನಾಕ್ರಮಗಳನ್ನು ಅರಿಯುವ ಅವಕಾಶ ನನಗೆ ಕೂಡಿಬಂತು. ಇದಕ್ಕೆ ಅಗತ್ಯವಾದ ಪರಭಾಷಾ ಕಲಿಕೆ ಮತ್ತು ಮಾತಾಡುವಿಕೆ, ಬೇರೆ ಜೀವನಕ್ರಮಗಳ ಜತೆಗೇ, ವಿದೇಶೀ ಸಾಹಿತ್ಯ ಮತ್ತು ವಿದೇಶೀ ಕಲೆಗಳ ಪರಿಚಯ ಮಾಡಿಕೊಳ್ಳುವುದಕ್ಕೆ ನಿಜಕ್ಕೂ ಅತ್ಯುತ್ತಮ ಮಾರ್ಗವಾಗಿತ್ತು. ಒಂದು ಕಠಿಣವಾದ ವೈಜ್ಞಾನಿಕ ಸಮಸ್ಯೆಯ ಮೇಲೆ ಸಮನಾದ ಲಕ್ಷ್ಯ ಕೇಂದ್ರೀಕೃತವಾಗಿರುವಾಗ ರಾಷ್ಟ್ರೀಯ ಮತ್ತು ಜನಾಂಗೀಯ ಭಿನ್ನತೆ ಎಷ್ಟು ಕ್ಷುಲ್ಲಕ ಎನ್ನುವುದು ನನಗೆ ಹೆಚ್ಚೆಚ್ಚು ಸ್ಪಷ್ಟವಾಗತೊಡಗಿತು. ಕಲೆಯಲ್ಲಿ ಸ್ಪಷ್ಟವಾಗಿ ಕಾಣುವ ವೈಚಾರಿಕ ಭಿನ್ನತೆ ಆತಂಕದ ವಿಷಯವಾಗಿರುವುದಕ್ಕಿಂತ ವ್ಯಕ್ತಿಯ ಸ್ವಂತ ಸಾಧ್ಯತೆಗಳ ಬೆಳವಣಿಗೆಯಾಗಿ ನನಗೆ ಅನಿಸಿತು.
ಈ ಹಿನ್ನೆಲೆಯೊಂದಿಗೆ ನಾನು ೧೯೨೫ರ ಬೇಸಿಗೆಯಲ್ಲಿ ಕೇಂಬ್ರಿಜ್‌ಗೆ ಆಗಮಿಸಿದೆ, ಮತ್ತು ಕಾಲೇಜೊಂದರಲ್ಲಿ ಒಂದು ಚಿಕ್ಕ ಸೈದ್ಧಾಂತಿಕರ ಗುಂಪಿನೆದುರು ನನ್ನ ಕೆಲಸದ ಕುರಿತು ಮಾತಾಡಿದೆ, ರಶಿಯನ್ ಭೌತವಿಜ್ಞಾನಿ ಕಪಿಟ್ಝಾನ ಕೊಠಡಿಯಲ್ಲಿ. ಅಲ್ಲಿದ್ದವರಲ್ಲಿ ಒಬ್ಬ ಕುಶಾಗ್ರಮತಿಯಾದ ಯುವ ವಿದ್ಯಾರ್ಥಿಯಿದ್ದ, ಅವನಿಗಿನ್ನೂ ಇಪ್ಪತ್ಮೂರರ ವಯಾಸ್ಸೂ ಆಗಿರಲಿಲ್ಲ; ಅವನು ನನ್ನ ಸಮಸ್ಯೆಗಳನ್ನೆತ್ತಿಕೊಂಡು ಕೆಲವೇ ತಿಂಗಳುಗಳಲ್ಲಿ ಆಣ್ವಿಕ ಕೋಶಗಳ ಕುರಿತು ಸವಿಸ್ತಾರವಾದ ತತ್ವವೊಂದನ್ನು ರಚನೆ ಮಾಡಿದ. ಅವನ ಹೆಸರು ಡಿರಾಕ್ ಎಂದಾಗಿತ್ತು. ಗಣಿತದಲ್ಲಿ ಅವನಿಗೆ ಅಸಾಧಾರಣವಾದ ನೈಪುಣ್ಯವಿತ್ತು. ಅವನ ಚಿಂತನಾ ವಿಧಾನಗಳು ನನಗಿಂತ ಬಹಳ ಭಿನ್ನವಾಗಿದ್ದುವು. ನಮಗೆ ಗೋಟಿಂಗ್‌ನಲ್ಲಿ ಅಭ್ಯಾಸವಿದ್ದ ವಿಧಾನಗಳಿಗಿಂತಲೂ ಅವನ ಗಣಿತ ವಿಧಾನಗಳು ಹೆಚ್ಚು ಸುಲಕ್ಷಣವೂ ಹೆಚ್ಚು ಅಸಾಮಾನ್ಯವೂ ಆಗಿದ್ದುವು. ಆದರೂ ಕೊನೆಯಲ್ಲಿ ಅವನು ಬೋರ್ನ್, ಜೋರ್ಡನ್ ಮತ್ತು ನಾನು ಮುಟ್ಟಿದ ಪರಿಣಾಮಗಳನ್ನೇ ಮುಟ್ಟಿದ, ಅಂತೂ ಪ್ರಮುಖವಾದ ಹೆಚ್ಚಿನ ವಿಷಯಗಳಲ್ಲಿ. ಈ ಮರು ನಿಶ್ಚಯ ಮತ್ತು ಪರಿಣಾಮಗಳು ಅಷ್ಟೊಂದು ಚೆಲುವಾಗಿ ಪೂರಕವಾಗಿದ್ದುವು ಎನ್ನುವುದು ವಿಜ್ಞಾನದ ‘ವಸ್ತುನಿಷ್ಠತೆ’ಗೆ ಮತ್ತು ಅದರ ಭಾಷೆ, ವರ್ಣ ಮತ್ತು ವಿಶ್ವಾಸ ನಿರಪೇಕ್ಷತೆಗೆ ಇನ್ನೊಂದು ಪುರಾವೆ ಒದಗಿಸಿತು.
ಕೋಪೆನ್‌ಹೇಗನ್ ಮತ್ತು ಕೇಂಬ್ರಿಜ್‌ನಂತೆ, ಗೋಟಿಂಗೆನ್ ಕೂಡಾ ಅಣುವಿಜ್ಞಾನಿಗಳ ಒಂದು ಅಂತಾರಾಷ್ಟ್ರೀಯ ಪರಿವಾರವಾಗಿ ಉಳಿಯಿತು. ಅಲ್ಲಿನ ಕಾರ್ಯ ಫ್ರಾಂಕ್, ಬೊರ್ನ್ ಮತ್ತು ಪೋಹ್ಲ್‌ರಿಂದ ನಿರ್ದೆಶಿಸಲ್ಪಡುತ್ತಿತ್ತು, ಹಾಗೂ ಅಣುಬಾಂಬಿನ ಸಂದರ್ಭದಲ್ಲಿ ನೀವು ಪತ್ರಿಕೆಗಳಲ್ಲಿ ಓದಿರಬಹುದಾದ ಓಪೆನ್‌ಹೈಮರ್ ಮತ್ತು ಬ್ಲಾಕೆಟ್ಟ್, ಹಾಗೂ ಆ ಕಾಲದಲ್ಲಿ ಗೋಟಿಂಗೆನ್‌ನಲ್ಲಿ ಕಲಿಯುತ್ತಿದ್ದ ಫರ್ಮಿ ಮುಂತಾದವರಿಂದ.
ನಾನೀ ವೈಯಕ್ತಿಕ ಸ್ಮರಣೆ ಮಾಡಿಕೊಂಡುದು ವಿಜ್ಞಾನಸಮುದಾಯದ ಅಂತಾರಾಷ್ಟ್ರೀಯ ಗುಣದ ಒಂದು ಉದಾಹರಣೆಗೆ ಮಾತ್ರ. ನಿಜ, ಬೇರೆ ಹಲವಾರು ವಿಜ್ಞಾನಗಳಲ್ಲೂ ಇದು ಶತಮಾನಗಳಿಂದ ಹೀಗೇ ಇದ್ದುದು ಮತ್ತು ಈ ಅಣು ವಿಜ್ಞಾನಿಗಳ ಪರಿವಾರ ಯಾವ ವಿಧದಲ್ಲೂ ಅಸಾಧಾರಣ ಎನ್ನುವಂತಿರಲಿಲ್ಲ. ಸಮಾನ ಕಾರ್ಯದ ಮೂಲಕ ರಾಷ್ಟ್ರದ ಗಡಿಗಳನ್ನು ಮೀರಿ ಸಂಬಂಧ ಹೊಂದಿದ ’ವಿದ್ವಜ್ಜನರ’ (Savants) ಅನೇಕ ಅಂತಾರಾಷ್ಟೀಯ ಪಂಗಡಗಳನ್ನು ನಾನು ವಿಜ್ಞಾನದ ಇತಿಹಾಸದಿಂದ ಹೆಸರಿಸಬಲ್ಲೆ.
ಬಹುಶಃ ನಾನು ಇನ್ನೊಂದು ವಿಜ್ಞಾನಿ ಕೂಟವನ್ನೂ ಹೆಸರಿಸಬೇಕು, ಈ ವಿಜ್ಞಾನಿಗಳು ಹದಿನೇಳನೇ ಶತಮಾನದಲ್ಲಿ ಯುರೋಪಿನಲ್ಲಿ ಗಣಿತ ವಿಜ್ಞಾನವನ್ನು ಸ್ಥಾಪಿಸಿದರು. ಈ ಉಲ್ಲೇಖ ಪ್ರತ್ಯೇಕವಾಗಿ ಪ್ರಸ್ತುತ, ಯಾಕೆಂದರೆ ಲೈಬ್ನಿಟ್ಸ್‌ನ ಸ್ಮರಣೆಯನ್ನು ಈ ವರ್ಷ ಆಚರಿಸಲಾಗುತ್ತಿದೆ, ಹಾಗೂ ವಿಜ್ಞಾನ ಅಕಾಡೆಮಿಗಳ ಸ್ಥಾಪನೆಯನ್ನೂ ಸಹಾ. ಈ ಯುಗದ ಕುರಿತು ಡಿಲ್ತಿ ನೀಡುವ ವಿವರಣೆಯ ಕೆಲವು ವಾಕ್ಯಗಳನ್ನು ನಾನಿಲ್ಲಿ ಉದ್ಧರಿಸ ಬಯಸುತ್ತೇನೆ:
ಯಾವುದೇ ಭಾಷೆ ಅಥವಾ ರಾಷ್ಟ್ರೀಯತೆಯ ಮಿತಿಗಳನ್ನು ಮೀರಿದ ಒಂದು ಸಂಬಂಧ ಕೆಲವೊಂದು ವ್ಯಕ್ತಿಗಳನ್ನು ಒಂದುಗೂಡಿಸಿತು; ಅವರು ತಮ್ಮ ಬದುಕನ್ನು ಈ ಹೊಸ ವಿಜ್ಞಾನಕ್ಕೆ ಧಾರೆಯೆರೆದವರು. ಅವರು ಹೊಸತೊಂದು ಸುಸಂಸ್ಕೃತ ವರ್ಗವಾಗಿ ಮೂಡಿಬಂದರು ಹಾಗೂ ಅವರಿಗೆ ಆ ಕುರಿತು ಸ್ವಯಂಪ್ರಜ್ಞೆಯಿತ್ತು, ಸರಿಸುಮಾರು ರಿನೇಸೆನ್ಸ್ ದಿನಗಳಲ್ಲಿ ಮಾನವತಾ ವಾದಿಗಳು ಮತ್ತು ಕಲಾವಿದರು ಅಂಥದೊಂದು ವರ್ಗವನ್ನು ರೂಪಿಸಿದ ಹಾಗೆಯೇ. ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳು ಪರಸ್ಪರ ತಿಳಿವನ್ನು ಸುಲಭವಾಗಿ ಸಂವಹಿಸಲು ಸಾಧ್ಯ ಮಾಡಿದುವು ಹಾಗೂ ಅವು ವಿಶ್ವ ವೈಜ್ಞಾನಿಕ ಸಾಹಿತ್ಯದ ಸಾಧನಗಳಾದುವು. ಹದಿನೇಳನೇ ಶತಮಾನದ ಮಧ್ಯ ಭಾಗದಲ್ಲಿ ಈಗಾಗಲೇ ತತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ನಡುವಣ ಸಹಭಾಗಿತ್ವಕ್ಕೆ ಪ್ಯಾರಿಸ್ ಕೇಂದ್ರವಾಗಿ ಮೂಡಿಬಂದಿತ್ತು. ಅಲ್ಲಿ ಗಸೆಂಡಿ, ಮಾರ್ಸೆನ್ನ್ ಮತ್ತು ಹಾಬ್ಸ್ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು ಹಾಗೂ ಜನರ ಜತೆ ಬೆರೆಯದ ಗರ್ವಿ ದೆಕಾರ್ತ್ ಕೂಡಾ ಅವರ ವರ್ತುಲದಲ್ಲಿ ಸ್ವಲ್ಪ ಕಾಲ ಇದ್ದ. ಅವನ ಇರವು ಹಾಬ್ಸ್‌ನ ಮೇಲೆ, ನಂತರ ಲೈಬ್ನಿಟ್ಸ್‌ನ ಮೇಲೆಯೂ, ಮರೆಯಲಾಗದ ಪ್ರಭಾವ ಬೀರಿತು; ಯಾಕೆಂದರೆ ಇಬ್ಬರೂ ಗಣಿತ ವಿಜ್ಞಾನದ ವಿಚಾರಗಳಿಗೆ ಜೀವನ ಮುಡಿಪಾಗಿಟ್ಟುದು ಅಲ್ಲಿಯೇ. ನಂತರ ಲಂಡನ್ ಇನ್ನೊಂದು ಕೇಂದ್ರವಾಯಿತು.
ಇದರಿಂದ ಏನು ಗೊತ್ತಾಗುತ್ತದೆಂದರೆ, ಇತಿಹಾಸದ ಉದ್ದಕ್ಕೂ ವಿಜ್ಞಾನದಲ್ಲಿ ಕೆಲಸ ನಡೆದುದು ಹೀಗೆಯೇ ಮತ್ತು ಈ ಋಷಿ ಗಣರಾಜ್ಯ (Republic of Sages)ಯುರೋಪಿನ ಜೀವನದಲ್ಲಿ ಯಾವತ್ತೂ ಪ್ರಧಾನ ಪಾತ್ರ ವಹಿಸಿದೆ. ಅಂಥದೊಂದು ಅಂತಾರಾಷ್ಟ್ರೀಯ ವರ್ತುಲಕ್ಕೆ ನಿಷ್ಠನಾಗಿರುವುದು ಒಬ್ಬ ವೈಜ್ಞಾನಿಕ ವ್ಯಕ್ತಿಯನ್ನು ತನ್ನದೇ ಜನರ ಸೇವೆ ಮಾಡುವುದಕ್ಕೆ ಮತ್ತು ಅವರಲ್ಲಿ ತಾನೊಬ್ಬನೆಂದು ಭಾವಿಸುವುದಕ್ಕೆ ತಡೆಯೊಡ್ಡುವುದಿಲ್ಲ ಎನ್ನುವ ವಿಷಯ ಸ್ವಯಂವೇದ್ಯ ಎಂದು ಲಾಗಾಯ್ತಿನಿಂದಲೂ ತಿಳಿಯಲಾಗಿದೆ. ಅದಕ್ಕೆ ವಿರುದ್ಧವಾಗಿ, ಅದು ಮನುಷ್ಯನೊಬ್ಬನ ಕ್ಷಿತಿಜವನ್ನು ವಿಸ್ತರಿಸಿ ಅವನ ಸ್ವಂತ ದೇಶದ ಉತ್ತಮ ಸಂಗತಿಗಳ ಬಗ್ಗೆ ಅವನ ಪ್ರೀತ್ಯಾದರವನ್ನು ಹೆಚ್ಚು ಮಾಡುತ್ತದೆ. ಅವನು ತನ್ನ ದೇಶವನ್ನು ಪ್ರೀತಿಸಲು ಕಲಿಯುತ್ತಾನೆ ಹಾಗೂ ದೇಶಕ್ಕೆ ಋಣಿಯಾಗುತ್ತಾನೆ.
-II-
ಇಷ್ಟೆಲ್ಲಾ ಹೇಳಿದ ಮೇಲೆ, ಯಾಕೆ ಈ ಎಲ್ಲಾ ವೈಜ್ಞಾನಿಕ ಸಹದಾಯಿತ್ವ, ಈ ಎಲ್ಲಾ ನೈಜ ಮನುಷ್ಯ ಸಂಬಂಧಗಳು, ದ್ವೇಷವನ್ನೂ ಯುದ್ಧವನ್ನೂ ತಪ್ಪಿಸುವಲ್ಲಿ ಮೇಲ್ನೋಟಕ್ಕೆ ಏನೂ ಮಾಡಿದಂತೆ ಅನಿಸುವುದಿಲ್ಲ ಎನ್ನುವ ಬಗ್ಗೆಯೂ ನಾನು ಮಾತಾಡಬೇಕಿದೆ.
ಮೊದಲನೇದಾಗಿ, ಒತ್ತಿ ಹೇಳಬೇಕಾದ್ದು, ವಿಜ್ಞಾನ ಸಾರ್ವಜನಿಕ ಬದುಕಿನ ಒಂದು ಸಣ್ಣ ಭಾಗವಷ್ಟೇ ಎನ್ನುವುದನ್ನು, ಪ್ರತಿಯೊಂದು ದೇಶದಲ್ಲೂ ಕೆಲವೇ ಕೆಲವು ಮಂದಿ ಮಾತ್ರವೇ ವಿಜ್ಞಾನಕ್ಕೆ ಸಂಬಂಧಿಸಿರುತ್ತಾರೆ ಎನ್ನುವುದನ್ನು. ರಾಜಕೀಯವಾದರೆ ಹೆಚ್ಚು ಬಲಿಷ್ಠ ಶಕ್ತಿಗಳಿಂದ ರೂಪಿಸಲ್ಪಟ್ಟುದು. ರಾಜಕೀಯವು ಜನರ ಮಹಾಕೂಟಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ, ಜನರ ಆರ್ಥಿಕ ಸ್ಥಿತಿಯನ್ನು, ಹಾಗೂ ಪರಂಪರೆ ಬೆಂಬಲಿಸುವ ಕೆಲವು ಪ್ರತಿಷ್ಠಿತ ಪಂಗಡಗಳು ಪ್ರಾಬಲ್ಯಕ್ಕಾಗಿ ನಡೆಸುವ ಹೋರಾಟವನ್ನು. ವಿವಾದಿತ ಪ್ರಶ್ನೆಗಳನ್ನು ವೈಜ್ಞಾನಿಕ ರೀತಿಯಲ್ಲಿ-ಎಂದರೆ, ವಸ್ತುನಿಷ್ಠವಾಗಿ, ಉದ್ವೇಗವಿಲ್ಲದೆ ಹಾಗೂ ಪರಸ್ಪರ ತಿಳುವಳಿಕೆಯ ಭಾವದಲ್ಲಿ-ಚರ್ಚಿಸಲು ಸಿದ್ಧರಾಗಿದ್ದ ಕೆಲವರನ್ನು ಈ ಶಕ್ತಿಗಳು ಯಾವತ್ತೂ ದಮನಿಸಿವೆ. ವಿಜ್ಞಾನದ ರಾಜಕೀಯ ಪ್ರಭಾವ ಎಂದೂ ಅಲ್ಪಪ್ರಮಾಣದ್ದು, ಮತ್ತು ಇದು ಅರ್ಥವಾಗುವಂಥದೇ. ಆದರೆ ಇದು ವಿಜ್ಞಾನಿಯನ್ನು ಕೆಲವು ಸಂಗತಿಗಳಲ್ಲಿ ಆಗಾಗ ಇನ್ನು ಬೇರೆ ಯಾವುದೇ ಗುಂಪಿಗಿಂತ ಹೆಚ್ಚು ಕಷ್ಟಕರ ಸ್ಥಿತಿಯಲ್ಲಿ ಇರಿಸುತ್ತದೆ, ಯಾಕೆಂದರೆ ವಿಜ್ಞಾನ, ತನ್ನ ಪ್ರಾಯೋಗಿಕ ಅನ್ವಯಗಳಲ್ಲಿ, ಜನಜೀವನದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಅಭಿವೃದ್ಧಿ ಮತ್ತು ರಾಜಕೀಯ ಶಕ್ತಿ ವಿಜ್ಞಾನದ ಸ್ಥಿತಿಯನ್ನು ಅವಲಂಬಿಸಿರುತ್ತವೆ, ಮತ್ತು ವಿಜ್ಞಾನಿ ಈ ಪ್ರಾಯೋಗಿಕ ಪರಿಣಾಮಗಳನ್ನು ಕಡೆಗಣಿಸುವಂತಿಲ್ಲ, ಅವನದೇ ವೈಜ್ಞಾನಿಕ ಆಸಕ್ತಿ ಎಷ್ಟು ಕಡಿಮೆ ಪ್ರಾಯೋಗಿಕವಾಗಿದ್ದರೂ. ಹೀಗೆ, ಹಲವೊಮ್ಮೆ ಒಬ್ಬ ಖಾಸಗಿ ವಿಜ್ಞಾನಿಯ ಕ್ರಿಯೆ ಆತ ಬಯಸುವುದಕ್ಕಿಂತಲೂ ಹೆಚ್ಚು ಭಾರವನ್ನು ಹೊತ್ತಿರುತ್ತದೆ, ಮತ್ತು ಬಹಳಷ್ಟು ಸಲ ಆತ ನಿರ್ಧರಿಸಬೇಕಾಗುತ್ತದೆ, ಆತನದೇ ಮನಃಸ್ಸಾಕ್ಷಿಗನುಸಾರ, ಉದ್ದೇಶವೊಂದು ಒಳ್ಳೆಯದೋ ಕೆಟ್ಟುದೋ ಎನ್ನುವುದನ್ನು. ರಾಷ್ಟ್ರ ರಾಷ್ಟ್ರಗಳ ನಡುವಣ ಭಿನ್ನಾಭಿಪ್ರಾಯಗಳನ್ನು ನೀಗಲಾರದ ಸಂದರ್ಭದಲ್ಲಿ ತನ್ನದೇ ಜನರಿಂದ ಬೇರ್ಪಡಬೇಕೋ, ಅಥವಾ ಸಮಾನ ಕಾರ್ಯದಿಂದ ಯಾವ ಮಿತ್ರರ ಜತೆ ಕೆಲಸ ಮಾಡುತ್ತಾನೋ ಅವರಿಂದ ಬೇರ್ಪಡಬೇಕೋ ಎನ್ನುವ ನೋವಿನ ನಿರ್ಣಯವನ್ನು ಅವನು ತೆಗೆದುಕೊಳ್ಳಬೇಕಾಗುತ್ತದೆ. ಬೇರೆ ಬೇರೆ ವಿಜ್ಞಾನಗಳಲ್ಲಿ ಈ ಪರಿಸ್ಥಿತಿ ವ್ಯತ್ಯಾಸವಿರಬಹುದು. ವೈದ್ಯಕೀಯ ಉದ್ಯೋಗಿಯೊಬ್ಬ, ರಾಷ್ಟ್ರೀಯತೆಯ ಪ್ರಶ್ನೆಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುವವನು, ರಾಷ್ಟ್ರದ ಒತ್ತಾಯಗಳಿಗೆ ಒಬ್ಬ ಭೌತವಿಜ್ಞಾನಿಗಿಂತ ಸುಲಭವಾಗಿ ಓಗೊಡಬಲ್ಲ, ಅದೂ ತನ್ನ ಮನಃಸ್ಸಾಕ್ಷಿಯನ್ನು ಹೊಂದಿಸಿಕೊಂಡು. ಭೌತವಿಜ್ಞಾನಿಯ ಸಂಶೋಧನೆಗಳು ಮಾರಕ ಆಯುಧಗಳ ತಯಾರಿಗೆ ಎಡೆಗೊಡುವುದು ಸಾಧ್ಯವಿರುತ್ತ, ಅತನಿಗೆ ಈ ನಿರ್ಣಯ ಸುಲಭವಲ್ಲ. ಆದರೆ ಹೆಚ್ಚೂ ಕಡಿಮೆ ಈ ದ್ವಂದ್ವ ಇದ್ದೇ ಇರುತ್ತದೆ; ಒಂದೆಡೆ ತನ್ನದೇ ಪ್ರತ್ಯೇಕವಾದ ಜನರ ಹಿತಕ್ಕಾಗಿ ವಿಜ್ಞಾನದ ಸಹಾಯವನ್ನು ಬಳಸ ಬಯಸುವ, ಆ ಮೂಲಕ ತನ್ನ ಬಲವರ್ಧನೆ ಆಶಿಸುವ ರಾಷ್ಟ್ರದ ಕೋರಿಕೆಗಳು, ಇನ್ನೊಂದೆಡೆ ವಿಜ್ಞಾನಿ ತನ್ನ ವೃತ್ತಿಗೆ ತೋರಿಸಬೇಕಾದ ನಿಷ್ಠೆ-ಈ ವೃತ್ತಿನಿಷ್ಠೆ ಅವನನ್ನು ಬೇರೆ ರಾಷ್ಟ್ರದ ಜನರ ಜತೆ ಸೇರಿಸುತ್ತದೆ.
ವಿಜ್ಞಾನಿ ಮತ್ತು ರಾಷ್ಟ್ರದ ನಡುವಣ ಸಂಬಂಧ ಕಳೆದ ದಶಕಗಳಲ್ಲಿ ಸ್ವಭಾವಾತ್ಮಕವಾಗಿ ಬದಲಾಗಿದೆ. ಮೊದಲ ಮಹಾಯುದ್ಧದ ಕಾಲದಲ್ಲಿ ವಿಜ್ಞಾನಿಗಳು ತಂತಮ್ಮ ದೇಶಗಳಿಗೆ ಎಷ್ಟು ಅಂಟಿಕೊಂಡಿದ್ದರೆಂದರೆ ಅಕಾಡೆಮಿಗಳು ಪರದೇಶಗಳ ವಿಜ್ಞಾನಿಗಳನ್ನು ಹೊರಹಾಕುವುದಿತ್ತು, ಅಥವಾ ವಿಜ್ಞಾನಿಗಳು ತಮ್ಮ ದೇಶದ ನೀತಿಯ ಪರವಾಗಿ ಇಲ್ಲವೇ ಇನ್ನೊಂದು ದೇಶದ ನೀತಿಯ ವಿರುದ್ಧವಾಗಿ ಹೇಳಿಕೆಗಳಿಗೆ ಸಹಿ ಹಾಕುವುದಿತ್ತು. ಇದು ಎರಡನೇ ಮಹಾಯುದ್ಧದ ಕಾಲದಲ್ಲಿ ನಡೆದುದೇ ಇಲ್ಲ ಎನ್ನಬಹುದು. ಈ ಸಂದರ್ಭದಲ್ಲಿ ವಿಜ್ಞಾನಿಗಳ ನಡುವಿನ ಕೊಂಡಿ ಹೆಚ್ಚು ಗಟ್ಟಿಯಾಗಿತ್ತು, ಹಲವು ದೇಶಗಳಲ್ಲಂತೂ ಹೇಗಿತ್ತೆಂದರೆ ವಿಜ್ಞಾನಿಗಳ ಮತ್ತು ಅವರದೇ ಸರಕಾರಗಳ ಮಧ್ಯೆ ವಿರಸಗಳು ಹುಟ್ಟಿಕೊಳ್ಳುವ ಮಟ್ಟಿಗೆ. ತಮ್ಮ ಸರಕಾರಗಳ ನೀತಿಗಳ ಮೇಲೆ ಮುಕ್ತವಾಗಿಯೂ ಯಾವುದೇ ಸೈದ್ಧಾಂತಿಕ ಪೂರ್ವಾಗ್ರಹವಿಲ್ಲದೆಯೂ ತೀರ್ಮಾನ ಕೈಗೊಳ್ಳುವ ಹಕ್ಕನ್ನು ವಿಜ್ಞಾನಿಗಳು ತಮ್ಮದಾಗಿಸಿಕೊಂಡಿದ್ದರು. ರಾಷ್ಟ್ರಗಳು ತಮ್ಮ ದೃಷ್ಟಿಯಿಂದ ವಿಜ್ಞಾನಿಗಳ ಅಂತಾರಾಷ್ಟ್ರೀಯ ಸಂಬಂಧಗಳನ್ನು ಆಳವಾದ ಸಂಶಯದಲ್ಲಿ ನೋಡುತ್ತಿದ್ದುವು, ಪರಿಣಾಮವಾಗಿ ವಿಜ್ಞಾನಿಗಳು ಕೆಲವೊಮ್ಮ ತಮ್ಮದೇ ದೇಶದಲ್ಲಿ ಕೈದಿಗಳಂತೆ ಪರಿಗಣಿಸಲ್ಪಡುತ್ತಿದ್ದರು, ಹಾಗೂ ಅವರ ಅಂತಾರಾಷ್ಟ್ರೀಯ ಸಂಬಂಧಗಳನ್ನು ಅನೈತಿಕವಾಗಿ ಕಾಣಲಾಗುತ್ತಿತ್ತು. ಈ ಬೆಳವಣಿಗೆ ರಾಷ್ಟ್ರೀಯ ಸಂಬಂಧದೆದುರು ಅದೃಷ್ಟಕರ ಅಂತಾರಾಷ್ಟ್ರೀಯ ಸಂಬಂಧವನ್ನು ಬಲಪಡಿಸುವತ್ತ ನಮ್ಮನ್ನು ಕೊಂಡೊಯ್ದೀತು, ಆದರೆ ಅದು ಜನಕೂಟ ವೈಜ್ಞಾನಿಕ ಉದ್ಯೋಗದ ವಿರುದ್ಧವೇ ಅಪನಂಬಿಕೆ ಮತ್ತು ವೈರತ್ವದ ಗಂಡಾಂತರಕಾರಿ ಅಲೆಯೊಂದರ ಮೂಲವಾಗಬಾರದು ಎಂಬ ಜಾಗ್ರತೆ ತೆಗೆದುಕೊಳ್ಳಬೇಕಾಗುತ್ತದೆ.
ಅಂಥ ಸಂಕಷ್ಟಗಳು ಹಿಂದಿನ ಶತಮಾನಗಳಲ್ಲೂ ಇದ್ದುವು, ಪ್ರಚಲಿತ ರಾಜಕೀಯ ಶಕ್ತಿಯ ವಿರುದ್ಧ, ವಿಜ್ಞಾನಿಗಳು ರೂಢಮೂಲ ವಿಶ್ವಾಸಗಳಿಗೆ ಪ್ರತಿಯಾಗಿ, ಕ್ಷಮಾಗುಣವನ್ನೂ ಸ್ವಾತಂತ್ರ್ಯವನ್ನೂ ಎತ್ತಿಹಿಡಿದಾಗ. ಒಬ್ಬ ಗೆಲೀಲಿಯೋ ಅಥವಾ ಜಿಯಾರ್ಡಿನೋ ಬ್ರೂನೋ ಬಗ್ಗೆ ಯೋಚಿಸಿದರೆ ಸಾಕು. ಈವತ್ತು ಈ ಸಂಕಷ್ಟಗಳು ಇನ್ನಷ್ಟು ಪ್ರಾಮುಖ್ಯತೆ ವಹಿಸಿವೆ. ಯಾಕೆಂದರೆ ವಿಜ್ಞಾನದ ಪ್ರಾಯೋಗಿಕ ಪರಿಣಾಮಗಳು ಮಿಲಿಯಗಟ್ಟಲೆ ಜನರ ವಿಧಿಯನ್ನು ತೀರ್ಮಾನಿಸಬಲ್ಲವು.
ಇದು ನನ್ನನ್ನೀಗ ಬದುಕಿನ ಭೀಕರವಾದೊಂದು ಮಗ್ಗುಲಿಗೆ ಕರೆತರುತ್ತದೆ, ಇದನ್ನು ನಾವು ಸ್ಪಷ್ಟವಾಗಿ ಗುರುತಿಸಬೇಕಾಗಿದೆ, ಇಲ್ಲದಿದ್ದರೆ ಸರಿಯಾದ ಕ್ರಮ ತೆಗೆದುಕೊಳ್ಳಲಾರೆವು. ಕಳೆದೊಂದು ದಶಕದಿಂದ ಭೌತವಿಜ್ಞಾನ ಕೈವಶ ಮಾಡಿಕೊಂಡಂಥ ಹಾಗೂ ನಾವು ಊಹಿಸಲೂ ಆರದ ವಿನಾಶದತ್ತ ನಮ್ಮನ್ನು ಒಯ್ಯಬಹುದಾದಂಥ ಹೊಸ ಇಂಧನ ಮೂಲಗಳ ಬಗ್ಗೆಯಷ್ಟೇ ನಾನು ಯೋಚಿಸುತ್ತಿಲ್ಲ. ಪ್ರಕೃತಿಯಲ್ಲಿ ಹಸ್ತಕ್ಷೇಪ ಮಾಡುವ ಹೊಸ ಸಾಧ್ಯತೆಗಳು ಹಲವು ಕ್ಷೇತ್ರಗಳಲ್ಲಿ ನಮಗೆ ಬೆದರಿಕೆಯೊಡ್ಡುತ್ತಿವೆ, ಈ ಕಳೆದ ವರ್ಷದಲ್ಲಿ ಜೀವ ನಾಶಪಡಿಸುವ ರಾಸಾಯನಿಕ ವಿಧಾನಗಳು ಬಳಕೆಯಾಗಿಲ್ಲ ಎನ್ನುವುದು ನಿಜವೇ ಆದರೂ. ಜೀವ ವಿಜ್ಞಾನದಲ್ಲಿ ಸಹಾ ನಾವು ಆನುವಂಶಿಕತೆಯ ವಿಧಾನಗಳ ಬಗ್ಗೆ ಹಾಗೂ ದೊಡ್ಡ ದೊಡ್ಡ ಅಲ್ಬುಮೆನ್ ಜೀವಾಣು ಕೋಶಗಳ (albumen molecules) ರಾಸಾಯನಿಕತೆ ಮತ್ತು ರಚನೆಯ ಬಗ್ಗೆ ಹೊಸ ಒಳನೋಟಗಳನ್ನು ಗಳಿಸಿದ್ದೇವೆ; ಇದರಿಂದ ರೋಗ ರುಜಿನುಗಳನ್ನು ಕೃತಕವಾಗಿ ಉಂಟುಮಾಡಬಹುದಾಗಿದೆ, ಮತ್ತು ಇದಕ್ಕಿಂತಲೂ ಹೀನವೆಂದರೆ, ಮನುಷ್ಯನ ಜೈವಿಕ ಬೆಳವಣಿಗೆಯನ್ನೇ ಯಾವುದೋ ಪೂರ್ವಯೋಜಿತ ವಿಶಿಷ್ಟ ತಳಿಗೆ ಅನುಗುಣವಾಗಿ ಪ್ರಭಾವಿಸಬಹುದಾಗಿದೆ. ಕೊನೇದಾಗಿ, ಮನುಷ್ಯರ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನೂ ಪ್ರಭಾವಕ್ಕೆ ಒಳಪಡಿಸಬಹುದು, ಹಾಗೂ ಇದನ್ನು ವೈಜ್ಞಾನಿಕ ದೃಷ್ಟಿಯಿಂದ ಮಾಡಿದರೆ ಸಹಸ್ರಾರು ಜನರ ಭಯಂಕರ ಮಾನಸಿಕ ವೈಕಲ್ಯಗಳಿಗೆ ಕಾರಣವಾಗಬಹುದು. ಮನುಕುಲದ ಬದುಕು ಮತ್ತು ಸಾವು ಮನುಷ್ಯರ ಕೆಲವೇ ಕೆಲವು ಪಂಗಡಗಳ ಕ್ರಿಯೆಗಳ ಮೇಲೆ ಅವಲಂಬಿಸಬಹುದಾದ ವಿಜ್ಞಾನದ ಒಂದು ವಿಶಾಲವಾದ ಸೀಮೆಯ ಪ್ರದೇಶವೊಂದನ್ನು ತಲಪುತ್ತಿದೆ ಎನಿಸುತ್ತದೆ. ಇಂದಿನ ತನಕ ಈ ವಿಷಯಗಳನ್ನು ಸುದ್ದಿ ಪತ್ರಿಕೆಗಳ ಪತ್ರಿಕಾ ಮತ್ತು ಪ್ರಚೋದಕ ರೀತಿಯಲ್ಲಿ ಚರ್ಚಿಸಲಾಗಿದೆ. ಮತ್ತು ಹೆಚ್ಚಿನ ಮಂದಿಯೂ ಮುಂಬರುವ ಅನಿವಾರ್ಯ ವೈಜ್ಞಾನಿಕ ಸಂಶೋಧನೆಗಳಿಂದ ತಮ್ಮನ್ನು ಬೆದರಿಸಬಹುದಾದ ಭೀಕರ ಅನಾಹುತಗಳನ್ನು ಮನಗಾಣದೆ ಇದ್ದಾರೆ. ಈ ಅನಾಹುತಗಳತ್ತ ಜನರ ಕಣ್ಣು ತೆರೆಸುವುದು ಖಂಡಿತವಾಗಿಯೂ ವಿಜ್ಞಾನದ ಕರ್ತವ್ಯ ಹಾಗೂ ರಾಷ್ಟ್ರೀಯ ಮತ್ತು ಸೈದ್ಧಾಂತಿಕ ಭೇದಗಳಿಲ್ಲದೆ ಇಡೀ ಮನುಕುಲ ಈ ಅಪಾಯಗಳನ್ನು ಎದುರಿಸಲು ಒಟ್ಟಾಗಬೇಕು. ನಿಜ, ಹೇಳುವಷ್ಟು ಸುಲಭವಲ್ಲ ಇದನ್ನು ಮಾಡುವುದು, ಆದರೆ ಇದು ನಾವು ಪಾರಾಗಬಹುದಾದ ಸಂಗತಿ ಖಂಡಿತವಾಗಿಯೂ ಅಲ್ಲ.
ವೈಯಕ್ತಿಕವಾಗಿ ವಿಜ್ಞಾನಿ, ತನ್ನದೇ ಮನಃಸ್ಸಾಕ್ಷಿಗೆ ಅನುಸಾರ ಮತ್ತು ಯಾವುದೇ ಬಂಧಗಳಿಂದ ಬಿಡಿಸಿಕೊಂಡು, ಗುರಿ ಸಾಧುವೋ ಅಲ್ಲವೋ, ಅಥವಾ ಎರಡರಲ್ಲಿ ಯಾವುದು ಕಡಿಮೆ ಕೆಟ್ಟುದು, ಎಂದು ಕೂಡಾ ತೀರ್ಮಾನಿಸುವುದು ಅಗತ್ಯವಿದೆ. ಇಡೀ ಜನಸಮೂಹಗಳು, ಅವರ ಜತೆ ಸರಕಾರದ ಅಧಿಕಾರವಹಿಸಿರುವವರು, ಹಲವೊಮ್ಮೆ ಬುದ್ಧಿಯಿಲ್ಲದೆ ಹಾಗೂ ಪೂರ್ವಾಗ್ರಹದೊಂದಿಗೆ ವರ್ತಿಸುತ್ತಾರೆ ಎನ್ನುವ ಸತ್ಯವನ್ನು ನಾವು ಅಲ್ಲಗಳೆಯುವಂತಿಲ್ಲ. ಅಂಥವರಿಗೆ ವೈಜ್ಞಾನಿಕ ಜ್ಞಾನವನ್ನು ಕೊಡುವುದರ ಮೂಲಕ ವಿಜ್ಞಾನಿಯನ್ನು, ಶಿಲ್ಲರ್ (Schiller) ಈ ಪದ್ಯದ ಸಾಲುಗಳಲ್ಲಿ ವಿವರಿಸುವ ಸ್ಥಿತಿಗೆ ತಳ್ಳುವುದು ಸಾಧ್ಯ:
“ಯಾವತ್ತೂ ಕುರುಡಾದವನ ಮೇಲೆ ಸ್ವರ್ಗದ ಪ್ರಕಾಶವನ್ನು ಸುರಿಯುವವರಿಗೆ ದುಃಖ ಕಟ್ಟಿಟ್ಟದ್ದು, ಅದು ಆತನಿಗೆ ಯಾವ ಬೆಳಕನ್ನೂ ಕೊಡುವುದಿಲ್ಲ, ಆದರೆ ನೆಲವನ್ನೂ ನಗರವನ್ನೂ ಉರಿಸಿ ಕರಕಲಾಗಿಸಬಹುದು.”
ವಿಜ್ಞಾನ ನಿಜಕ್ಕೂ ಜನಾಂಗಗಳ ನಡುವೆ ತಿಳುವಳಿಕೆ ನೀಡಬಲ್ಲುದೇ, ಅಂಥದೊಂದು ಸನ್ನಿವೇಶವನ್ನು ಅದು ಎದುರಿಸಿದಾಗ? ಮಹಾ ಶಕ್ತಿಗಳನ್ನು ಬಿಡುಗಡೆಗೊಳಿಸುವ ಸಾಮರ್ಥ್ಯ ಅದಕ್ಕಿದೆ, ಇದು ವರೆಗೂ ಮನುಷ್ಯನ ಅಧೀನದಲ್ಲಿದ್ದ ಶಕ್ತಿಗಿಂತಲೂ ಜಾಸ್ತಿ; ಆದರೆ ಈ ಶಕ್ತಿಗಳನ್ನು ವಿವೇಕದಿಂದ ಬಳಸದೆ ಇದ್ದಲ್ಲಿ ಅವು ನಮ್ಮನ್ನು ತಮಂಧದತ್ತ ಒಯ್ದಾವು.
ಕೆಲವು ಶತಮಾನಗಳ ಹಿಂದೆ ನೋಡೋಣ. ಮಧ್ಯಯುಗದ ಕೊನೆಯಲ್ಲಿ ದೈವೋಕ್ತಿಯ ಸುತ್ತ ಕೇಂದ್ರೀಕೃತವಾದ ಕ್ರಿಶ್ಚಿಯನ್ ವಾಸ್ತವತೆಯಲ್ಲದೆ, ಭೌತಿಕ ಅನುಭವದ ಇನ್ನೊಂದು ವಾಸ್ತವತೆಯನ್ನೂ ಮನುಷ್ಯ ಕಂಡುಕೊಂಡ. ಅದು ನಾವು ನಮ್ಮ ಇಂದ್ರಿಯಗಳ ಅಥವಾ ಪ್ರಯೋಗಗಳ ಮೂಲಕ ಅನುಭವಿಸುವ ‘ವಸ್ತುನಿಷ್ಠ’ ವಾಸ್ತವತೆ. ಆದರೆ ಈ ಹೊಸ ಕ್ಷೇತ್ರದ ಕಡೆಗಿನ ಬೆಳವಣಿಗೆಯಲ್ಲೂ ವಿಚಾರದ ಕೆಲವೊಂದು ವಿಧಾನಗಳು ಬದಲಾಗದೆ ಉಳಿದುವು. ಪ್ರಕೃತಿಯೆನ್ನುವುದು ಕಾರ್ಯ ಕಾರಣಗಳಿಗನುಸಾರ ಸ್ಥಳಾವಕಾಶದಲ್ಲಿ ನಿಲ್ಲಿಸಿದ ಹಾಗೂ ಕಾಲದಲ್ಲಿ ಬದಲಾಗುವ ವಸ್ತುಗಳಿಂದ ಮೂಡಿದಂಥದು. ಇದರ ಹೊರಗೆ ಚೈತನ್ಯದ ಜಗತ್ತೊಂದು ಇತ್ತು, ಹೊರ ಜಗತ್ತನ್ನು ಸರಿಸುಮಾರಾಗಿ ಒಂದು ಪರಿಪೂರ್ಣ ದರ್ಪಣದಂತೆ ಪ್ರತಿಬಿಂಬಿಸುವ ನಮ್ಮ ಮನಸ್ಸಿನ ವಾಸ್ತವತೆ ಅದು. ವಿಜ್ಞಾನಿಗಳು ನಿಶ್ಚಯಿಸಿದ ಹೆಚ್ಚಿನ ವಾಸ್ತವತೆಯೂ ಕ್ರಿಶ್ಚಿಯನ್ ವಾಸ್ತವತೆಗಿಂತ ವ್ಯತ್ಯಾಸವಾಗಿತ್ತಾದರೂ ಅದೊಂದು ದೈವಿಕ ಜಗತ್ತಿನ ಕ್ರಿಯಾಶೀಲತೆಯನ್ನು ಪ್ರತಿನಿಧೀಕರಿಸಿತ್ತು; ಅದರಲ್ಲಿ ಮನುಷ್ಯನ ಕಾರ್ಯ ದೃಢವಾದ ಪಾಯದ ಮೇಲೆ ನಿಂತಿತ್ತು ಹಾಗೂ ಅದರಲ್ಲಿ ಜೀವನೋದ್ದೇಶದ ಕುರಿತು ಚೂರೂ ಸಂದೇಹ ಇರುವುದು ಸಾಧ್ಯವಿರಲಿಲ್ಲ. ಲೋಕವೆನ್ನುವುದು ನಿರ್ವಾತದಲ್ಲಿ ಮತ್ತು ಕಾಲದಲ್ಲಿ ಅನಂತವಾಗಿ ಇತ್ತು, ಅದು ಒಂದು ತರದಲ್ಲಿ ದೇವರನ್ನು ಸ್ಥಳಾಂತರಗೊಳಿಸಿತ್ತು, ಅಥವಾ ತನ್ನ ಅನಂತತೆಯ ಕಾರಣ ದೈವಿಕತೆಗೆ ಒಂದು ಸಂಕೇತವೆನಿಸಿತ್ತು.
ಆದರೆ ಪ್ರಕೃತಿಯ ಬಗೆಗಿನ ಈ ದೃಷ್ಟಿ ಕೂಡಾ ನಮ್ಮ ಶತಮಾನದಲ್ಲಿ ಬುಡಮೇಲಾಗಿಬಿಟ್ಟಿದೆ. ಮೂರ್ತ ಕಾರ್ಯಗಳು ನಮ್ಮ ಜಗದ ಕೇಂದ್ರಕ್ಕೆ ಹೆಚ್ಚೆಚ್ಚು ಸರಿದಂತೆ ಮೂಲಭೂತ ವೈಚಾರಿಕ ಧೋರಣೆಗಳು ತಮ್ಮ ಇದಮಿತ್ಥ ಪ್ರಾಮುಖ್ಯತೆಯನ್ನು ಕಳೆದುಕೊಂಡುವು. ಕಾಲ ಮತ್ತು ಸ್ಥಳ ಕೂಡಾ ಅನುಭವದ ವಿಷಯಗಳಾದುವು ಹಾಗೂ ತಮ್ಮ ಸಾಂಕೇತಿಕ ಸತ್ವವನ್ನು ಕಳೆದುಕೊಂಡುವು. ವಿಜ್ಞಾನದಲ್ಲಿ ನಾವಿಂದು ಹೆಚ್ಚೆಚ್ಚು ಅರಿತುಕೊಂಡಿದ್ದೇವೆ: ಪ್ರಕೃತಿಯ ಕುರಿತಾದ ನಮ್ಮ ಅರಿವು ಯಾವುದೇ ಜ್ಞಾನಗ್ರಹಿಕೆಯಿಂದ (cognition­­) ಉಂಟಾಗುವುದಿಲ್ಲ, ಅಂಥದೊಂದು ಅಡಿಗಲ್ಲಿನ ಮೇಲೆ ಅದನ್ನು ಕಟ್ಟುವುದು ಸಾಧ್ಯವಿಲ್ಲ, ಬದಲು ಎಲ್ಲಾ ಜ್ಞಾನಗ್ರಹಿಕೆಯೂ, ಮಾತಿಗೆ ಹೇಳುವುದಾದರೆ, ಅಳೆಯಲಾರದ ಒಂದು ಆಳದ ಮೇಲೆ ತೂಗಿ ನಿಂತಿದೆ.
ವಿಜ್ಞಾನದ ಈ ಬೆಳವಣಿಗೆ ಪ್ರಾಯಶಃ ಮನುಷ್ಯ ಜೀವನದ ಎಲ್ಲಾ ಮೌಲ್ಯಗಳ ಹೆಚ್ಚೆಚ್ಚು ಸಾಪೇಕ್ಷವಾದ ಬೆಲೆಯಂದಾಜಿಗೆ ಸರಿದೂಗುತ್ತದೆ, ಈಗ್ಗೆ ಕೆಲವು ದಶಕಗಳಿಂದಲೂ ಕಂಡು ಬರುತ್ತಿರುವ ಬೆಲೆಯಂದಾಜು ಇದು, ಹಾಗೂ ಇದೊಂದು ಸಾಮಾನ್ಯವಾದ ಸಂದೇಹವಾದೀ ಧೋರಣೆಯಲ್ಲಿ ಕೊನೆಗೊಳ್ಳಬಹುದಾದ್ದು; ಇದರ ಕೊನೆಯಲ್ಲಿರುವುದು ಯಾಕಾದರೂ? (‘for what purpose’) ಎನ್ನುವ ಹತಾಶೆಯ ಪ್ರಶ್ನೆ. ಅವಿಶ್ವಾಸದ ಧೋರಣೆ ಹೀಗೆ ಬೆಳೆಯುತ್ತದೆ; ನಾವು ’ಶೂನ್ಯವಾದ’ (Nihilism) ಎಂದು ಕರೆಯುವುದು ಇದನ್ನೇ. ಈ ದೃಷ್ಟಿಕೋನದಿಂದ, ಜೀವನ ಬಹುಶಃ ಉದ್ದೇಶರಹಿತವಾಗಿ, ಇಲ್ಲವೇ ಕನಿಷ್ಠ ನಮ್ಮ ಮಾತು ನಡೆಯದ ಆದರೆ ನಾವು ಭಾಗವಹಿಸಬೇಕಾದ ಸಾಹಸವಾಗಿ ಕಾಣಿಸುತ್ತದೆ. ಇಂದು ನಾವು ಲೋಕದ ಹಲವೆಡೆಗಳಲ್ಲಿ ಈ ಧೋರಣೆಯನ್ನು ನೋಡುತ್ತೇವೆ ಮತ್ತು ಇದರ ಅತ್ಯಂತ ಅಹಿತವಾದ ರೀತಿಯೆಂದರೆ, ವಿ. ವೈಟ್ಸೇಕರ್ (v. Weizsäcker) ಈಚೆಗೆ ಹೇಳಿದಂತೆ, ಭ್ರಮಾತ್ಮಕ ಶೂನ್ಯವಾದ (illusionary nihilism). ಭ್ರಮೆ ಮತ್ತು ಆತ್ಮವಂಚನೆಯಿಂದ ವೇಷ ಮರೆಸಿದ ಶೂನ್ಯವಾದ ಅದು.
ಪ್ರತಿಯೊಂದು ಶೂನ್ಯವಾದೀ ಧೋರಣೆಯ ಸ್ವಭಾವವೆಂದರೆ ವ್ಯಕ್ತಿಯೊಬ್ಬನ ಪ್ರತಿಕ್ರಿಯೆಗಳಿಗೆ ದಿಕ್ಕು ಮತ್ತು ಬಲ ಕೊಡಬಲ್ಲ ಗಟ್ಟಿಯಾದೊಂದು ವಿಶ್ವಾಸವಿಲ್ಲದೆ ಇರುವುದು. ಸರಿ ಮತ್ತು ತಪ್ಪುಗಳ ಬಗ್ಗೆ ಮತ್ತು ಯಾವುದು ಭ್ರಮೆ ಯಾವುದು ನಿಜ ಎಂಬುದರ ಬಗ್ಗೆ ತಪ್ಪಿಲ್ಲದ ಸಹಜ ಸ್ಪಂದನ ಇಲ್ಲದಿರುವುದು. ರಾಷ್ಟ್ರಗಳ ಜೀವನದಲ್ಲಿ ಅದು ದಿಕ್ಕುಗತಿಯ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ; ಆಗ ಯಾವುದೇ ನಿರ್ದಿಷ್ಟ ಗುರಿಯ ಸಾಧನೆಯಲ್ಲಿ ಒಟ್ಟುಗೂಡಿಸಿದ ಭಾರೀ ಶಕ್ತಿಗಳಿಗೆ ಅಂಥ ಗುರಿವಿರುದ್ಧವಾದ ಪರಿಣಾಮ ಉಂಟಾಗುತ್ತದೆ, ಹಾಗೂ ಇದು ಭಾರೀ ವಿನಾಶವನ್ನು ತರಬಹುದು. ಜನರು ಹಲವೊಮ್ಮೆ ದ್ವೇಷದಿಂದ ಎಷ್ಟು ಕುರುಡಾಗಿರುತ್ತಾರೆಂದರೆ ಅವರು ಈ ಬದಲಾವಣೆಯನ್ನು ಅಸಡ್ಡೆಯಿಂದ ನೋಡುತ್ತಾರೆ ಹಾಗೂ ಭುಜ ಕುಲುಕಿಸಿ ಅಲ್ಲಿಗೆ ಬಿಟ್ಟುಬಿಡುತ್ತಾರೆ.
ಸ್ವಲ್ಪ ಮೊದಲು ನಾನಂದೆ, ಜನರಲ್ಲಿನ ಈ ಧೋರಣೆಯ ಬೆಳವಣಿಗೆ ವೈಜ್ಞಾನಿಕ ಯೋಚನೆಯಲ್ಲಿನ ಬೆಳವಣಿಗೆಯ ಜತೆ ಸ್ವಲ್ಪ ಮಟ್ಟಿಗೆ ಸಂಬಂಧಿತವಾಗಿರಬಹುದು ಎಂದು. ಆದ್ದರಿಂದ ವಿಜ್ಞಾನ ಕೂಡಾ ತನ್ನ ಗಟ್ಟಿ ವಿಶ್ವಾಸಗಳನ್ನು ಕಳೆದುಕೊಂಡಿದೆಯೇ ಎಂದು ನಾವು ಕೇಳಬೇಕಾಗುತ್ತದೆ. ಇದರ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಲು ನಾನು ಕಾತರನಾಗಿದ್ದೇನೆ. ಇದಕ್ಕೆ ವಿರುದ್ಧವಾದುದೇ ಸತ್ಯ. ಜಗತ್ತಿನ ದೊಡ್ಡ ದೊಡ್ಡ ಸಮಸ್ಯೆಗಳ ಕುರಿತಾದ ಆಶಾವಾದಿ ನಿಲುವಿಗೆ ವಿಜ್ಞಾನದ ಸದ್ಯದ ಸ್ಥಿತಿಯೇ ಬಹುಶಃ ಅತ್ಯಂತ ಸಮರ್ಥವಾದ ವಾದವಾಗಿದೆ.
ಯಾಕೆಂದರೆ, ನಮ್ಮ ಜ್ಞಾನ ’ಆಕಾಶಮಧ್ಯದಲ್ಲಿ ತೂಗಿರುವುದು’ ಎಂದು ನಾವು ಕಂಡುಕೊಂಡ ಆ ವಿಜ್ಞಾನ ಶಾಖೆಗಳಲ್ಲಿ, ಆ ಅಷ್ಟೇ ಶಾಖೆಗಳಲ್ಲಿ ಮಾತ್ರವೇ, ಪ್ರಸ್ತುತ ವಿದ್ಯಮಾನಗಳ ಸ್ಫಟಿಕಸ್ಪಷ್ಟ ತಿಳಿವನ್ನು ನಾವು ಸಾಧಿಸಿದ್ದೇವೆ. ಈ ಜ್ಞಾನ ಎಷ್ಟು ಪಾರದರ್ಶಕ, ಎಷ್ಟು ಪ್ರಶ್ನಾತೀತ ಎಂದರೆ ವಿಭಿನ್ನ ಜನಕೂಟಗಳಿಗೆ ಸೇರಿದ ವಿಜ್ಞಾನಿಗಳು ಮುಂದಿನ ಸಕಲ ವಿಚಾರ ಮತ್ತು ಜ್ಞಾನಗ್ರಹಿಕೆಯ ಸಂಶಯಾತೀತ ಮೂಲವಾಗಿ ಅದನ್ನು ಸ್ವೀಕರಿಸಿದ್ದಾರೆ. ವಿಜ್ಞಾನದಲ್ಲಿ ನಾವು ತಪ್ಪು ಮಾಡುತ್ತೇವೆನ್ನುವುದೇನೋ ನಿಜ, ಮತ್ತು ಇದನ್ನು ಪತ್ತೆ ಹಚ್ಚಿ ಸರಿಪಡಿಸಲು ಸಾಕಷ್ಟು ವೇಳೆಯೂ ತಗಲಬಹುದು. ಆದರೆ ಯಾವುದು ಸರಿ ಯಾವುದು ತಪ್ಪು ಎನ್ನುವುದರ ಕುರಿತು ಅಂತಿಮ ನಿರ್ಣಯವೊಂದು ಇರುತ್ತದೆ ಎನ್ನುವ ಭರವಸೆ ನಮಗಿದೆ. ಈ ನಿರ್ಣಯ ವಿಜ್ಞಾನಿಗಳ ವಿಶ್ವಾಸ, ವರ್ಣ ಅಥವಾ ಮೂಲದ ಮೇಲೆ ನಿಂತಿರದು, ಬದಲು ಉನ್ನತ ಶಕ್ತಿಯೊಂದು ಅದನ್ನು ತೆಗೆದುಕೊಳ್ಳುತ್ತದೆ, ಹಾಗೂ ಆ ನಿರ್ಣಯ ಎಲ್ಲ ಕಾಲದ ಎಲ್ಲರಿಗೂ ಅನ್ವಯಿಸುತ್ತದೆ. ರಾಜಕೀಯ ಬದುಕಿನಲ್ಲಿ ನಾವು ನಿರಂತರವಾದ ಮಾರ್ಪಾಟನ್ನು, ಎಂದರೆ ಭ್ರಮೆಗಳ ಹಾಗೂ ತಪ್ಪು ದಾರಿಗೊಯ್ಯುವ ಒಂದು ವಿಚಾರಗುಚ್ಛ ಭ್ರಮೆಗಳ ಮತ್ತು ಅಷ್ಟೇ ತಪ್ಪು ದಾರಿಗೊಯ್ಯುವ ಇನ್ನೊಂದು ವಿಚಾರಗುಚ್ಛದ ಜತೆ ನಡೆಸುವ ಹೋರಾಟವನ್ನು, ತಪ್ಪಿಸಲು ಸಾಧ್ಯವಿಲ್ಲವಾದರೂ, ವಿಜ್ಞಾನದಲ್ಲಿ ಯಾವತ್ತೂ ಒಂದು ’ಸರಿ ತಪ್ಪು’ ಇದ್ದೇ ಇರುತ್ತದೆ. ನಮ್ಮ ಆಸೆಗಳಿಂದ ಪ್ರಭಾವಿತವಾಗದ ಒಂದು ಹೆಚ್ಚಿನ ಶಕ್ತಿಯಿದೆ, ಅದೇ ಕೊನೆಗೂ ತೀರ್ಮಾನಿಸುವುದು ಮತ್ತು ತೀರ್ಪು ನೀಡುವುದು. ವಿಜ್ಞಾನದ ತಿರುಳು ರೂಪಿತವಾಗಿರುವುದು, ನನಗನಿಸುವಂತೆ, ಪ್ರಾಯೋಗಿಕ ಲಾಭಗಳಿಂದ ಪ್ರಭಾವಿತವಾಗದಿರುವ ಶುದ್ಧ ವಿಜ್ಞಾನಗಳಿಂದ. ಪ್ರಕೃತಿಯ ರಹಸ್ಯ ಸಾಮರಸ್ಯಗಳನ್ನು ಶುದ್ಧಾಂಗ ವಿಚಾರ ಕಾಣಲು ಪ್ರಯತ್ನಿಸುವ ಶಾಖೆಗಳು ಅವು. ಎಲ್ಲಿ ವಿಜ್ಞಾನ ಮತ್ತು ಕಲೆಯನ್ನು ಪ್ರತ್ಯೇಕಿಸಲಾರೆವೋ ಅಂಥ ಅತಿ ಒಳಗಿನ ವರ್ತುಲವನ್ನು, ಮನುಷ್ಯರ ಆಗ್ರಹಗಳು ಮತ್ತು ಆಸೆಗಳು ವಿರೂಪಗೊಳಿಸಲಾಗದ ಶುದ್ಧ ಸತ್ಯದ ಸಾಕಾರವನ್ನು, ಮನುಕುಲ ಈವತ್ತು ಕಂಡುಕೊಳ್ಳಬಹುದಾಗಿದೆ.
ಬಹುಜನ ಸಮೂಹಕ್ಕೆ ಈ ಸತ್ಯದ ಪ್ರವೇಶವಿಲ್ಲ, ಆದ ಕಾರಣ ಜನರ ಮನೋಧರ್ಮವನ್ನು ಇದು ಪ್ರಭಾವಿಸಲಾರದು ಎಂದು ನೀವು ಆಕ್ಷೇಪಿಸಬಹುದು. ಆದರೆ ಯಾವ ಕಾಲದಲ್ಲೂ ಬಹುಜನ ಸಮೂಹಕ್ಕೆ ಕೇಂದ್ರಕ್ಕೆ ನೇರ ಪ್ರವೇಶ ಇದ್ದಿರಲಿಲ್ಲ, ಮತ್ತು ದ್ವಾರ ಎಲ್ಲರಿಗೂ ತೆರೆದಿಲ್ಲವಾದರೂ ದ್ವಾರದ ಆಚೆ ವಂಚನೆಯಿರುವ ಸಾಧ್ಯತೆಯಿಲ್ಲ ಎಂದು ಇಂದಿನ ಜನ ತೃಪ್ತಿಪಟ್ಟುಕೊಳ್ಳಬಹುದಾಗಿದೆ. ನಮಗಲ್ಲಿ ಶಕ್ತಿಯಿಲ್ಲ-ನಿರ್ಣಯಗಳು ಉನ್ನತ ಶಕ್ತಿಗಳಿಂದ ತೆಗೆದುಕೊಳ್ಳಲ್ಪಡುತ್ತವೆ. ಜನ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಹೆಸರಿನಿಂದ ಈ ’ಕೇಂದ್ರ’ವನ್ನು ಕರೆದಿದ್ದಾರೆ. ’ಚೈತನ್ಯ’ ಎಂದೋ, ’ದೇವರು’ ಎಂದೋ ಕರೆದಿದ್ದಾರೆ, ಅಥವಾ ಉಪಮೆಗಳನ್ನು ಉಪಯೋಗಿಸಿದ್ದಾರೆ, ಅಥವಾ ಸ್ವರದಲ್ಲಿ ಇಲ್ಲವೇ ಚಿತ್ರದಲ್ಲಿ ರೂಪಿಸಿದ್ದಾರೆ. ಈ ಕೇಂದ್ರಕ್ಕೆ ಹಲವು ದಾರಿಗಳು, ಈವತ್ತೂ ಕೂಡ, ಹಾಗೂ ವಿಜ್ಞಾನ ಅವುಗಳಲ್ಲಿ ಒಂದು. ಬಹುಶಃ ನಾವು ನಮ್ಮನ್ನು ಅರ್ಥಮಾಡಿಸಿಕೊಳ್ಳುವ ಒಂದು ಸರ್ವ ಸಾಮಾನ್ಯ ಭಾಷೆಯಿಲ್ಲ. ಹಲವು ಜನ ಈ ಕೇಂದ್ರವನ್ನು ಕಾಣದಿರಲು ಇದುವೇ ಕಾರಣ ಇದ್ದೀತು. ಆದರೆ ಅದು ಎಂದೂ ಇದ್ದ ಹಾಗೆ ಇಂದೂ ಇದೆ, ಹಾಗೂ ಯಾವುದೇ ಲೋಕರಚನೆ ಅದರ ಮೇಲೇ ನಿಂತಿರುತ್ತದೆ. ಅಂಥ ಲೋಕರಚನೆಯನ್ನು ಕಾಣಲು ಅದು ದೃಷ್ಟಿಯಿಂದ ಮರೆಮಾಚದ ಜನರ ದ್ರಷ್ಟಾರತನ ಬೇಕು.
ವಿಜ್ಞಾನ ಜನಾಂಗಗಳ ಮಧ್ಯೆ ಸೌಹಾರ್ದವನ್ನು ತರಬಲ್ಲುದು. ಅದು ಹಾಗೆ ಮಾಡುವುದು ರೋಗಿಷ್ಟರಿಗೆ ಸಾಂತ್ವನ ನೀಡಬಲ್ಲುದು ಎನ್ನುವ ಕಾರಣಕ್ಕಲ್ಲ, ಅದರ ಸಹಾಯದಿಂದ ಕೆಲವು ರಾಜಕೀಯ ಶಕ್ತಿಗಳು ಬೆದರಿಕೆ ನೀಡಬಹುದು ಎನ್ನುವ ಕಾರಣಕ್ಕೂ ಅಲ್ಲ, ಆದರೆ ಸಮಸ್ತ ಜಗತ್ತಿನಲ್ಲಿ ಸೂತ್ರವೊಂದನ್ನು ಸ್ಥಾಪಿಸಬಲ್ಲ ’ಕೇಂದ್ರ’ದ ಕಡೆಗೆ ನಮ್ಮ ಗಮನ ಸೆಳೆಯಬಲ್ಲುದು ಎನ್ನುವ ಕಾರಣದಿಂದ ಮಾತ್ರ, ಪ್ರಾಯಶಃ ಜಗತ್ತು ಸುಂದರ ಎನ್ನುವ ಸರಳ ಸತ್ಯದ ಕಡೆಗೆ. ವಿಜ್ಞಾನಕ್ಕೆ ಅಷ್ಟೊಂದು ಮಹತ್ವ ನೀಡುವುದು ಅಹಂಕಾರದಂತೆ ತೋರಬಹುದು, ಆದರೆ ನಾನು ನಿಮಗೆ ನೆನಪು ಮಾಡಲೇ, ಜೀವನದ ಹಲವು ಬಗಲುಗಳಲ್ಲಿ ನಾವು ಹಿಂದಣ ಯುಗಗಳ ಕುರಿತು ಅಸೂಯೆ ಪಡಬಹುದಾದರೂ, ವೈಜ್ಞಾನಿಕ ಸಾಧನೆಯಲ್ಲಿ, ಪ್ರಕೃತಿಯ ಶುದ್ಧ ಜ್ಞಾನ ಗ್ರಹಿಕೆಯಲ್ಲಿ ನಮ್ಮ ಕಾಲ ಯಾವುದಕ್ಕೂ ಎರಡನೆಯದಲ್ಲ.
ಏನೇ ಆದರೂ, ಮುಂದಿನ ಹಲವು ದಶಕಗಳ ತನಕ ಜ್ಞಾನದಲ್ಲಿನ ಆಸಕ್ತಿ ತಾನೇ ತಾನಾಗಿ ಮನುಕುಲದಲ್ಲಿ ಒಂದು ಪ್ರಬಲ ಶಕ್ತಿಯಾಗಿ ಉಳಿದೀತು. ಈ ಆಸಕ್ತಿಯ ಮೇಲೆ ಕೆಲವು ಕಾಲ ವಿಜ್ಞಾನದ ಪ್ರಾಯೋಗಿಕ ಪ್ರಶ್ನೆಗಳು ಮತ್ತು ಪ್ರಾಬಲ್ಯಕ್ಕಾಗಿ ನಡೆವ ಹೋರಾಟ ನೆರಳು ಕವಿಸಿದರೂ ಅದು ಕೊನೆಗೂ ವಿಜಯ ಗಳಿಸೀತು ಮತ್ತು ವಿವಿಧ ದೇಶಗಳ ಮತ್ತು ವರ್ಣಗಳ ಜನಗಳನ್ನು ಒಟ್ಟು ಸೇರಿಸೀತು. ಜಗತ್ತಿನ ಎಲ್ಲಾ ಭಾಗಗಳಲ್ಲೂ ಜನ ಸುಖವಾಗಿದ್ದಾರು, ಅವರು ಹೊಸ ಜ್ಞಾನವನ್ನು ಪಡೆದಾಗ, ಮತ್ತು ಅದನ್ನು ಮೊದಲು ಶೋಧಿಸಿದ ಮನುಷ್ಯನಿಗೆ ಅವರು ಕೃತಜ್ಞರಾದಾರು.
ನೀವಿಲ್ಲಿ ಸೇರಿದ್ದು ನಿಮ್ಮ ವರ್ತುಲದಲ್ಲಿ ಜನಗಳ ನಡುವಿನ ತಿಳುವಳಿಕೆಗೆ ಕೊಡುಗೆ ನೀಡುವುದಕ್ಕೆ. ಇದಕ್ಕೆ ತಾರುಣ್ಯದ ಸ್ವಾತಂತ್ರ್ಯ ಮತ್ತು ಸ್ವಯಂಸ್ಫೂರ್ತಿಯಿಂದ ಇತರ ದೇಶಗಳ ಜನರನ್ನು, ಅವರ ವಿಚಾರಗಳನ್ನು ಮತ್ತು ಭಾವನೆಗಳನ್ನು ಅರಿಯುವುದಕ್ಕಿಂತ ಮಿಗಿಲಾದ ಮಾರ್ಗ ಇನ್ನೊಂದಿಲ್ಲ. ನಿಮ್ಮ ವೈಜ್ಞಾನಿಕ ಕೆಲಸದಿಂದ ಗಂಭೀರವೂ ಭ್ರಷ್ಟಾತೀತವೂ ಆದ ಚಿಂತನಾವಿಧಾನವೊಂದನ್ನು ತೆಗೆದುಕೊಳ್ಳಿರಿ, ಅದನ್ನು ಪಸರಿಸಲು ಸಹಾಯ ಮಾಡಿರಿ, ಯಾಕೆಂದರೆ ಅದಲ್ಲದೆ ಯಾವ ತಿಳುವಳಿಕೆಯೂ ಸಾಧ್ಯವಿಲ್ಲ. ವಿಜ್ಞಾನಕ್ಕಿಂತಲೂ ಆಚೆಗಿನ, ನಿಜಕ್ಕೂ ಮುಖ್ಯವಾದ, ಆದರೆ ಮಾತಿಗೆ ಕಷ್ಟವಾದ, ಸಂಗತಿಗಳನ್ನು ಗೌರವಿಸಿರಿ.

ನಿಮ್ಮ ಟಿಪ್ಪಣಿ ಬರೆಯಿರಿ

Filed under ಸಾಹಿತ್ಯ